W,W,W,W,W: ಸತತ ಐದು ಎಸೆತಗಳಲ್ಲಿ 5 ವಿಕೆಟ್! ಟಿ20 ಕ್ರಿಕೆಟ್​ನಲ್ಲಿ ಚರಿತ್ರೆ ಸೃಷ್ಟಿಸಿದ ಐರ್ಲೆಂಡ್ ವೇಗಿ | Curtis Campher Creates History First Male Cricketer to Take 5 Wickets in 5 Consecutive Balls

W,W,W,W,W: ಸತತ ಐದು ಎಸೆತಗಳಲ್ಲಿ 5 ವಿಕೆಟ್! ಟಿ20 ಕ್ರಿಕೆಟ್​ನಲ್ಲಿ ಚರಿತ್ರೆ ಸೃಷ್ಟಿಸಿದ ಐರ್ಲೆಂಡ್ ವೇಗಿ | Curtis Campher Creates History First Male Cricketer to Take 5 Wickets in 5 Consecutive Balls

26 ವರ್ಷದ ಕರ್ಟಿಸ್ ಕ್ಯಾಂಪರ್ ಐರ್ಲೆಂಡ್ ಪರ 111 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು ದೇಶಿ ಟಿ20 ಟೂರ್ನಮೆಂಟ್‌ನಲ್ಲಿ ಮನ್‌ಸ್ಟರ್ ರೆಡ್ಸ್ ತಂಡದ ನಾಯಕರಾಗಿ ಆಡುತ್ತಿದ್ದಾರೆ. ಗುರುವಾರ ನಾರ್ತ್ ವೆಸ್ಟ್ ವಾರಿಯರ್ಸ್ ವಿರುದ್ಧದ ಈ ಐತಿಹಾಸಿಕ ಪ್ರದರ್ಶನದೊಂದಿಗೆ ಅವರು ಪಂದ್ಯದ ದಿಕ್ಕನ್ನೇ ಬದಲಾಯಿಸಿದರು.

ಹೇಗಿತ್ತು ಕ್ಯಾಂಪರ್ ಪ್ರದರ್ಶನ

ಕ್ಯಾಂಪರ್ ಮೊದಲು 44 ರನ್ ಗಳಿಸುವ ಮೂಲಕ ತಮ್ಮ ತಂಡದ ಪರ ಗರಿಷ್ಠ ರನ್ ಕೊಡುಗೆ ನೀಡಿದ್ದರು ಮತ್ತು ನಂತರ ಬೌಲಿಂಗ್‌ನಲ್ಲಿ ಅಂತಹದ್ದೇ ಕೊಡುಗೆ ನೀಡಿದರು. ಎದುರಾಳಿ ತಂಡವು ಕ್ಯಾಂಪರ್​ ಮಾರಕ ದಾಳಿಗೆ ತತ್ತರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮನ್ಸ್ಟರ್ ರೆಡ್ಸ್ ತಂಡ 189 ರನ್ ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ, ನಾರ್ತ್ ವೆಸ್ಟ್ ವಾರಿಯರ್ಸ್ 11.4 ಓವರ್‌ಗಳಲ್ಲಿ 5 ವಿಕೆಟ್‌ಗೆ 86 ರನ್ ಗಳಿಸಿ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡುತ್ತಿತ್ತು.

12ನೇ ಓವರ್‌ನಲ್ಲಿ ಕಣಕ್ಕಿಳಿದ ಕ್ಯಾಂಪರ್ ಆ ಓವರ್​​ನ ಐದನೇ ಮತ್ತು ಆರನೇ ಎಸೆತಗಳಲ್ಲಿ ಡೇವಿಡ್ ವಿಲ್ಸನ್ ಮತ್ತು ಗ್ರಹಾಂ ಹ್ಯೂಮ್ ಅವರನ್ನು ಔಟ್ ಮಾಡಿದರು. ನಂತರ ಅವರು 14 ನೇ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಆಂಡಿ ಮೆಕ್‌ಬ್ರೈನ್, ರಾಬಿ ಮಿಲ್ಲರ್ ಮತ್ತು ಜೋಶ್ ವಿಲ್ಸನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಐದು ಎಸೆತಗಳಲ್ಲಿ ಐದು ವಿಕೆಟ್‌ ಪಡೆಯುವ ಮೂಲಕ ಟಿ20 ಕ್ರಿಕೆಟ್​​ನಲ್ಲಿ ಚರಿತ್ರೆ ಸೃಷ್ಟಿಸಿದರು.

6ಕ್ಕೆ6 ವಿಕೆಟ್ ಪಡೆಯುವ ಅವಕಾಶ ಮಿಸ್

ನಾರ್ತ್ ವೆಸ್ಟ್ ವಾರಿಯರ್ಸ್ ಪರ ಜೋಶ್ ವಿಲ್ಸನ್ ಕೊನೆಯ ಬ್ಯಾಟ್ಸ್‌ಮನ್ ಆಗಿದ್ದರು ಮತ್ತು ಅವರು 14 ನೇ ಓವರ್‌ನ ಮೂರನೇ ಎಸೆತದಲ್ಲಿ ಬೌಲ್ಡ್ ಆದರು. ಅವರ ತಂಡದ ಇನ್ನಿಂಗ್ಸ್ ಇಲ್ಲಿಗೆ ಕೊನೆಗೊಂಡಿತು, ಇದರಿಂದಾಗಿ ಕ್ಯಾಂಪರ್‌ಗೆ ಆರನೇ ಎಸೆತ ಎಸೆಯುವ ಅವಕಾಶ ಸಿಗಲಿಲ್ಲ. ಅವರು ಇನ್ನೂ ಒಂದು ವಿಕೆಟ್ ಪಡೆದಿದ್ದರೆ, ಸತತ ಆರು ಎಸೆತಗಳಲ್ಲಿ ಆರು ವಿಕೆಟ್ ಪಡೆದ ವಿಶ್ವದ ಮೊದಲ ಆಟಗಾರನಾಗಬಹುದಿತ್ತು.

ಪಂದ್ಯದ ನಂತರ, ಈ ಅಪೂರ್ಣ ದಾಖಲೆಯ ಬಗ್ಗೆ ಕೇಳಿದಾಗ, ಅವರು ಮುಗುಳ್ನಗುತ್ತಾ, “ಇದು ಹಿಂದೆ ಸಂಭವಿಸಿರಬಹುದೆಂದು ನಾನು ಭಾವಿಸುವುದಿಲ್ಲ, ನನ್ನ ಪ್ರದರ್ಶನದಿಂದ ನನಗೆ ಸಂತೋಷವಾಗಿದೆ” ಎಂದು ಹೇಳಿದರು.

ಇಲ್ಲಿಯವರೆಗೆ ಅನೇಕ ಬೌಲರ್‌ಗಳು 4 ಎಸೆತಗಳಲ್ಲಿ 4 ವಿಕೆಟ್‌ಗಳನ್ನು ಪಡೆಯುವ ಸಾಧನೆ ಮಾಡಿದ್ದಾರೆ, ಆದರೆ ಅವರು 5 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಪಡೆದ ಮೊದಲ ಮತ್ತು ಏಕೈಕ ಆಟಗಾರ. ಈಗ ಅವರ ಹೆಸರು ಕ್ರಿಕೆಟ್‌ನ ಪುಟಗಳಲ್ಲಿ ವಿಶೇಷ ಅಕ್ಷರಗಳಲ್ಲಿ ಬರೆಯಲ್ಪಟ್ಟಿದೆ.

ಪುರುಷರ ಪ್ರೊಫೆಷನಲ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಸತತ ವಿಕೆಟ್‌ ಪಡೆದ ಬೌಲರ್

ಕರ್ಟಿಸ್ ಕ್ಯಾಮ್‌ಫರ್ – 5 ವಿಕೆಟ್‌ಗಳು (T20, ಇಂಟರ್-ಪ್ರಾವಿನ್ಸಿಯಲ್) – ಮಾನ್‌ಸ್ಟರ್ ರೆಡ್ಸ್ vs ನಾರ್ತ್-ವೆಸ್ಟ್ ವಾರಿಯರ್ಸ್, 2024

ಲಸಿತ್ ಮಾಲಿಂಗ – 4 ವಿಕೆಟ್‌ಗಳು (T20I) – ಶ್ರೀಲಂಕಾ vs ನ್ಯೂಜಿಲೆಂಡ್, 2019

ರಶೀದ್ ಖಾನ್ – 4 ವಿಕೆಟ್‌ಗಳು (T20I) – ಅಫ್ಘಾನಿಸ್ಥಾನ vs ಐರ್ಲೆಂಡ್, 2019

ಕರ್ಟಿಸ್ ಕ್ಯಾಮ್‌ಫರ್ – 4 ವಿಕೆಟ್‌ಗಳು (T20I) – ಐರ್ಲೆಂಡ್ vs ನೆದರ್‌ಲ್ಯಾಂಡ್ಸ್, 2021

ಆಂಡ್ರೆ ಆಡಮ್ಸ್ – 4 ವಿಕೆಟ್‌ಗಳು (ಲಿಸ್ಟ್ ಎ) – ಆಕ್ಲೆಂಡ್ vs ನಾರ್ಥರ್ನ್ ಡಿಸ್ಟ್ರಿಕ್ಟ್ಸ್ (NZ ಡೊಮೆಸ್ಟಿಕ್), 2007

ಕೀತ್ ಹ್ಯಾಚೆಟ್ – 4 ವಿಕೆಟ್‌ಗಳು (ಫಸ್ಟ್-ಕ್ಲಾಸ್) – ತಸ್ಮೇನಿಯಾ vs ಸೌತ್ ಆಸ್ಟ್ರೇಲಿಯಾ, 1971