Last Updated:
ಕೊಳ್ತಿಗೆ ನಾರಾಯಣ ಗೌಡರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೊಳ್ತಿಗೆ ನಿವಾಸಿ, 62 ವರ್ಷಗಳ ಯಕ್ಷಗಾನ ಅನುಭವ. ತುಳು ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ. ‘ಯಕ್ಷಯಾನ’ ಪುಸ್ತಕದ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ದಕ್ಷಿಣ ಕನ್ನಡ: ಬಾಲಿವುಡ್ ಸಿನಿಮಾದಲ್ಲಿ (Film) ಕಳನಾಯಕ (Villain) ಪಾತ್ರದಲ್ಲಿ ಪ್ರಾಣ್ ಪಾತ್ರ ಯಾವ ರೀತಿ ಅಜರಾಮರವಾಗಿದೆಯೋ, ಅದೇ ರೀತಿ ಕನ್ನಡದಲ್ಲಿ ವಜ್ರಮುನಿ ಅವರ ಪಾತ್ರವೂ ಶ್ರೇಷ್ಠ. ಸಿನಿಮಾದಲ್ಲಿ ಯಾವ ರೀತಿ ಖಳನಾಯಕರು ಫೇಮಸ್ ಆಗಿದ್ದಾರೋ, ಅದೇ ರೀತಿ ಕರಾವಳಿಯ ಗಂಡುಕಲೆ ಎಂದೇ ಖ್ಯಾತಿವೆತ್ತ ಯಕ್ಷಗಾನದಲ್ಲೂ (Yakshagana) ಹಲವು ಕಲಾವಿದರು ತಮ್ಮ ಖಳನಾಯಕ ಪಾತ್ರದಿಂದಲೇ ಮೇರು ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಕಲಾವಿದರಲ್ಲಿ ದಕ್ಷಿಣ ಕನ್ನಡ (Dakshian Kannada) ಜಿಲ್ಲೆಯ ಪುತ್ತೂರಿನ ಕೊಳ್ತಿಗೆ ನಿವಾಸಿಯಾಗಿರುವ ಕೊಳ್ತಿಗೆ ನಾರಾಯಣ ಗೌಡರೂ ಒಬ್ಬರು. ಯಕ್ಷಗಾನ ಕಲೆಯಲ್ಲಿ ಸುಮಾರು 62 ವರ್ಷಗಳ ಸುದೀರ್ಘ ಅನುಭವವನ್ನು ಪಡೆದಿರುವ ಈ ಕಲಾವಿದರು ಇದೀಗ ಸದ್ಯ ವಿಶ್ರಾಂತಿ ಜೀವನದಲ್ಲಿದ್ದಾರೆ.
ಎತ್ತಿನಗಾಡಿಯಲ್ಲಿ ಯಕ್ಷಗಾನ ತಂಡ ತೆರಳುತ್ತಿದ್ದ ಸಮಯದಲ್ಲಿ ಯಕ್ಷಗಾನದ ಕಲೆಗೆ ಆಕರ್ಷಿತರಾದ ನಾರಾಯಣ ಗೌಡರು ತಂಡದಲ್ಲಿದ್ದ ಹಿರಿಯ ಕಲಾವಿದರ ಬಣ್ಣದ ವೇಷದ ಬಟ್ಟೆಗಳನ್ನು ತೊಳೆದುಕೊಡುವ ಕೆಲಸದ ಮೂಲಕ ಯಕ್ಷಗಾನ ಕಲೆಗೆ ಪರಿಚಯವಾದವರು. ಅಲ್ಲಿ ಯಕ್ಷಗಾನದ ಮುಖವರ್ಣಿಕೆ, ನಾಟ್ಯ, ರಂಗಸಜ್ಜಿಗೆ, ಮಾತುಗಾರಿಕೆ ಮುಂತಾದ ಪಟ್ಟುಗಳನ್ನು ಕರಗತ ಮಾಡಿಕೊಂಡ ಇವರು ಬಳಿಕ ಹಿಂದೆ ತಿರುಗಿ ನೋಡಿದವರಲ್ಲ. ಜಿಲ್ಲೆಯ ಅತ್ಯಂತ ಪ್ರಸಿದ್ಧ ಮೇಳಗಳಲ್ಲಿ ಕಲಾವಿದರಾಗಿ ದುಡಿದಿರುವ ಇವರ ಕಲಾಪ್ರೌಢಿಮೆಗೆ ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.
ತುಳು ಅಕಾಡಮಿ ಪ್ರಶಸ್ತಿ ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ಕೊಡ ಮಾಡುವ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಯಕ್ಷಗಾನ ಪ್ರಸಂಗದಲ್ಲಿ ಖಳನಾಯಕನ ಪಾತ್ರವನ್ನೇ ಹೆಚ್ಚಾಗಿ ನಿರ್ವಹಿಸಿಕೊಂಡು ಬಂದಿರುವ ಕೊಳ್ತಿಗೆ ನಾರಾಯಣ ಗೌಡರಿಗೆ ಯಕ್ಷಗಾನದ ಒಂಟಿಸಲಗ ಎನ್ನುವ ಕೀರ್ತಿಗೂ ಭಾಜನರಾದವರು.
ಇವರ ಅದ್ಭುತ ಕಲಾ ಪ್ರದರ್ಶನಕ್ಕೆ ಮಾರು ಹೋಗಿದ್ದ ಅಸ್ತಂಗತರಾಗಿರುವ ಪೇಜಾವರ ಮಠದ ಹಿರಿಯ ಸ್ವಾಮೀಜಿಗಳು ಇವರನ್ನು ಅಂದು ಶಾಸ್ತ್ರಾಭ್ಯಾಸಕ್ಕೆ ಕರೆದು ಗೌರವಿಸಿದ್ದರು. ಯಕ್ಷಗಾನದ ವಜ್ರಮುನಿ ಎಂದೇ ಗುರುತಿಸಲ್ಪಟ್ಟಿರಯವ ಇವರ ಹಿರಣ್ಯಕಶ್ಯಪು ಪಾತ್ರ ಯಕ್ಷಗಾನದ ಇತಿಹಾಸದ ಪುಸ್ತಕದಲ್ಲಿ ಬರೆದಿಡಬೇಕಾದ ಪಾತ್ರಗಳಲ್ಲಿ ಒಂದಾಗಿದೆ ಅನ್ನೋದು ಯಕ್ಷಗಾನ ಪ್ರಿಯರ ಅನಿಸಿಕೆಯಾಗಿದೆ. ನಾಟ್ಯ, ಮಾತು, ಅರ್ಥ ಹೀಗೆ ಎಲ್ಲದರಲ್ಲೂ ಎತ್ತಿದ ಕೈಯಾಗಿರುವ ಕೊಳ್ತಿಗೆ ನಾರಾಯಣ ಗೌಡರು ಸದ್ಯ ನಿವೃತ್ತ ಜೀವನವನ್ನು ಸಾಗಿಸುತ್ತಿದ್ದು, ಯಕ್ಷಗಾನದಲ್ಲಿನ ತಮ್ಮ ಅಪಾರ ಅನುಭವವನ್ನು ತಮ್ಮದೇ ಆದ ಯಕ್ಷಯಾನ ಎನ್ನುವ ಪುಸ್ತಕವನ್ನೂ ಹೊರತಂದಿದ್ದಾರೆ.
Dakshina Kannada,Karnataka
July 23, 2025 2:02 PM IST