ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT

ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT

ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT

ಪತಿಯ ಅಕಾಲಿಕ ನಿಧನದಿಂದ ಧೃತಿಗೆಡದ ಮಹಿಳೆಯೊಬ್ಬಳು, ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಆಯ್ಕೆ ಆಗುವ ಮೂಲಕ ಗಂಡನ ಕನಸು ನನಸು ಮಾಡಿದ್ದಾಳೆ.

soni bisht with her family

 

ಡೆಹರಾಡೂನ್​: ಉತ್ತರಾಖಂಡ: ಮದುವೆಯಾಗಿ ತಿಂಗಳಲ್ಲೇ ಗಂಡನನ್ನು ಕಳೆದುಕೊಂಡ ವಿಧವೆಯೊಬ್ಬಳು, ಕಷ್ಟ ಕಾರ್ಪಣ್ಯ ದಾಟಿ ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ‘ಮಹಿಳೆ ಅಬಲೆಯಲ್ಲ ಸಬಲೆ’ ಎಂಬುದನ್ನು ಸಾಬೀತುಪಡಿಸುವ ಮೂಲಕ ಮಾದರಿಯಾಗಿದ್ದಾರೆ. ಉತ್ತರಾಖಂಡ ಸೋನಿ ಬಿಶ್ತ್ ಮಾದರಿಯಾದ ಮಹಿಳೆ.

ಮದುವೆಯಾದ ಕೇವಲ 34 ದಿನಗಳಲ್ಲಿ ಅಪಘಾತದಲ್ಲಿ ಸೈನಿಕರಾಗಿದ್ದ ಪತಿ ನೀರಜ್ ಭಂಡಾರಿಯನ್ನು ಸೋನಿ ಕಳೆದುಕೊಂಡಿದ್ದರು. ಎಲ್ಲ ಅಡೆತಡೆ ಹಾಗೂ ಅಡ್ಡಿ ಆತಂಕಗಳನ್ನು ಮೆಟ್ಟಿನಿಂತು ಭಾರತೀಯ ಸೇನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಉನ್ನತ ಅಧಿಕಾರಿಯಾಗಿ ಆಯ್ಕೆ ಆಗಿದ್ದಾರೆ.

ಸೇನೆಯಲ್ಲಿ ಸೇವೆ ಸಲ್ಲಿಸುವುದು ಜೀವನದ ಕನಸಾಗಿತ್ತು: ”ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದು ನನ್ನ ಜೀವನದ ಕನಸಾಗಿತ್ತು. ಇದೀಗ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸುತ್ತಿರುವೆ. ಕುಟುಂದವರ ಸಹಕಾರ ಮತ್ತು ಧೈರ್ಯ ಹೇಳುವವರು ಇಲ್ಲದಿದ್ದರೆ ಇದು ಅಸಾಧ್ಯವಾಗಿತ್ತು” ಎಂದು ನೋವಿನಲ್ಲೂ ಧೈರ್ಯ ತೋರಿದ ಸೋನಿ ಅವರು ತಮ್ಮ ಸಾಹಸಗಾಥೆ ಬಿಚ್ಚಿಟ್ಟಿದ್ದಾರೆ.

ಇವರ ಇಡೀ ಕುಟುಂಬವೇ ಸೇನೆಯಲ್ಲಿ ಸೇವೆ ಸಲ್ಲಿಸುತ್ತೆ: ಬಾಗೇಶ್ವರ ಜಿಲ್ಲೆಯ ದರ್ಶನ್ ಪಟ್ಟಿ ನಕುರಿ ನಿವಾಸಿಯಾಗಿರುವ ಸೋನಿ, ಶನಿವಾರ (ಮಾ. 8) ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (ಒಟಿಎ) ನಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಅಧಿಕಾರಿಯಾಗಿ ನಿಯೋಜನೆಗೊಂಡರು. ಪತಿಯನ್ನು ಕಳೆದುಕೊಂಡ ನೋವಿನಲ್ಲೂ ಸಾಧನೆ ತೋರಿದ ಮಹಿಳೆಯ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆರ್ಮಿ ಆರ್ಡನೆನ್ಸ್ ಕಾರ್ಪ್ಸ್‌ನಲ್ಲಿ ಇದೀಗ ಲೆಫ್ಟಿನೆಂಟ್ ಆಗಿ ಅವರನ್ನು ಸೇನೆ ನೇಮಿಸಿದೆ. 13ನೇ ಗಾರ್ಡ್ಸ್ ರೆಜಿಮೆಂಟ್​ನಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರ ತಂದೆ ಕುಂದನ್ ಸಿಂಗ್ ಬಿಶ್ತ್ ಇತ್ತೀಚೆಗಷ್ಟೇ ನಿವೃತ್ತಿಯಾಗಿದ್ದು, ಇವರ ಇಡೀ ಕುಟುಂಬ ದೇಶ ಸೇವೆಯಲ್ಲಿರುವುದು ಗಮನಾರ್ಹ.

ಮಾನಸಿಕ ನೋವನ್ನು ನುಂಗಿ ಸಾಧನೆ ಮಾಡಿದ ಸೋನಿ: ಸಾಮಾನ್ಯ ಹುಡುಗಿಯಂತೆ ತನ್ನ ಜೀವನವನ್ನು ನಡೆಸುತ್ತಿದ್ದ ಸೋನಿ ಅವರನ್ನು 2023ರಲ್ಲಿ ಉತ್ತರಾಖಂಡದ ಖತಿಮಾ ನಿವಾಸಿ ಹಾಗೂ 18ನೇ ಕುಮಾವೂನ್ ರೆಜಿಮೆಂಟ್‌ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ನೀರಜ್ ಭಂಡಾರಿ ಅವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ಆದರೆ, ಮದುವೆಯಾದ 34 ದಿನದಲ್ಲೇ ರಸ್ತೆ ಅಪಘಾತವೊಂದರಲ್ಲಿ ಪತಿಯನ್ನು ಕಳೆದುಕೊಕೊಂಡ ಸೋನಿ, ಮಾನಸಿಕವಾಗಿ ಕುಗ್ಗಿದ್ದರು. ಕಿರಿಯ ಸಹೋದರ ರಾಹುಲ್ ಪಾರ್ಶ್ವವಾಯುಗೆ ತುತ್ತಾಗಿದ್ದು ಸೋನಿಗೆ ಇನ್ನಿಲ್ಲದ ಕಷ್ಟ ಅನ್ನಿಸಿತು. ಆದರೆ, ಅವರ ಅತ್ತೆ – ಮಾವ ಮತ್ತು ಪೋಷಕರ ಧೈರ್ಯದ ಮಾತುಗಳಿಂದ ಸಿಡಿದೆದ್ದ ಸೋನಿ, ತನ್ನ ಪತಿಯ ಕನಸುಗಳನ್ನು ನನಸಾಗಿಸಲು ಮತ್ತು ಅವನ ನೆನಪುಗಳನ್ನು ಜೀವಂತವಾಗಿಡಲು ನಿರ್ಧರಿಸಿದ್ದಳು. ಅದರಂತೆ ವೀರ್ ನಾರಿ ಪ್ರವೇಶ ಯೋಜನೆಯಡಿ ಸೈನ್ಯಕ್ಕೆ ಸೇರಲು ನಿರ್ಧರಿಸಿದರು. ಇದಕ್ಕಾಗಿ ಕಷ್ಟಪಟ್ಟು ದುಡಿದು ಎಲ್ಲಾ ಪರೀಕ್ಷೆಗಳಲ್ಲಿ ಯಶಸ್ವಿ ಆದರು.

ಮಹಿಳಾ ದಿನಾಚರಣೆ ದಿನ ಲೆಫ್ಟಿನೆಂಟ್​ ಆಗಿ ಅಧಿಕಾರ ಸ್ವೀಕಾರ: ಶನಿವಾರ(ಮಾ. 8) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿ (OTA) ಯ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಸೋನಿ ಲೆಫ್ಟಿನೆಂಟ್ ಅಧಿಕಾರಿಯಾಗಿ ಪದವಿ ಕೂಡ ಸ್ವೀಕರಿಸಿದರು. ಸೇನೆಗೆ ಆಯ್ಕೆಯಾಗಿದ್ದ ಸೋನಿ ಇದಕ್ಕೂ ಮುನ್ನ ಮೊದಲ ಪೋಸ್ಟಿಂಗ್ ಅಸ್ಸಾಂನಲ್ಲಿತ್ತು. ಇದೀಗ ಸೇನಾ ಆರ್ಡನೆನ್ಸ್ ಕಾರ್ಪ್ಸ್‌ನಲ್ಲಿ ಅವರನ್ನು ನಿಯೋಜಿಸಲಾಗಿದೆ. ಸೋನಿಯ ಸಾಧನೆ ಕಂಡು, ಅತ್ತೆ-ಮಾವ ಮತ್ತು ಪೋಷಕರು ಭಾವುಕರಾದ ಘಟನೆ ಕೂಡ ನಡೆಯಿತು. ಸೋನಿಯ ತಂದೆ ಕುಂದನ್ ಸಿಂಗ್ ಬಿಶ್ತ್, ತಾಯಿ ಮಾಲ್ತಿ ಬಿಶ್ತ್ ಮತ್ತು ಸಹೋದರ ರಾಹುಲ್ ಬಿಶ್ತ್ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಭಾಗವಹಿಸಿದ್ದರು.

ಸೈನಿಕ ಕುಟುಂಬದಿಂದ ಸ್ಫೂರ್ತಿ: ಸೋನಿ ಬಿಶ್ತ್ ಮಿಲಿಟರಿ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ಅಜ್ಜ ಹರಕ್ ಸಿಂಗ್ ಬಿಶ್ತ್ ಕೂಡ ಸೈನ್ಯದಲ್ಲಿದ್ದರು. ಸೋನಿ ಅವರ ತಂದೆ ಕುಂದನ್ ಸಿಂಗ್ ಬಿಶ್ತ್ ಬ್ರಿಗೇಡ್ ಆಫ್ ಗಾರ್ಡ್ಸ್ ಬೆಟಾಲಿಯನ್‌ನಿಂದ ಸುಬೇದಾರ್ ಹುದ್ದೆಯಿಂದ ಇತ್ತೀಗಷ್ಟೇ ನಿವೃತ್ತರಾಗಿದ್ದಾರೆ. ರಾಷ್ಟ್ರೀಯ ಭದ್ರತಾ ಪಡೆ (NSG) ಮತ್ತು ರಾಷ್ಟ್ರೀಯ ರೈಫಲ್ಸ್ (RR) ನಂತಹ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು. ಸೋನಿ ಅವರ ಕಿರಿಯ ಸಹೋದರ ರಾಹುಲ್ ಕೂಡ ಸೇನೆಯಲ್ಲಿದ್ದಾರೆ. ಇಡೀ ಕುಟುಂಬವೇ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು ಇದುವೇ ಸೋನಿಗೆ ಪ್ರೇರಣೆ ನೀಡಿತು ಎಂದು ಆಕೆಯ ಪೋಷಕರು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *