ರಾಜ್ಯಾದ್ಯಂತ ‘ಪೊಲೀಸ್ ರನ್-2025’ ಮ್ಯಾರಥಾನ್ ಓಟ – POLICE RUN 2025 MARATHON

 

ರಾಜ್ಯಾದ್ಯಂತ ‘ಪೊಲೀಸ್ ರನ್-2025’ ಮ್ಯಾರಥಾನ್ ಓಟ – POLICE RUN 2025 MARATHON

ರಾಜ್ಯಾದ್ಯಂತ ಇಂದು ಪೊಲೀಸ್ ರನ್​-2025 ಮ್ಯಾರಥಾನ್​ ಓಟ ಆಯೋಜಿಸಲಾಗಿತ್ತು.

ಕರ್ನಾಟಕ ಪೊಲೀಸ್ ರನ್-2025 ಮ್ಯಾರಥಾನ್

ರಾಯಚೂರು: ಜಿಲ್ಲೆಯಲ್ಲಿ ಇಂದು ‘ಫ್ರೀ ಕರ್ನಾಟಕ ಫಿಟ್‌ನೆಸ್ ಫಾರ್ ಆಲ್’ ಹಾಗೂ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಥೀಮ್‌ನಡಿಯಲ್ಲಿ ‘ಕರ್ನಾಟಕ ಪೊಲೀಸ್ ರನ್-2025’ ಮ್ಯಾರಥಾನ್ ಓಟ ನಡೆಯಿತು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 5 ಕಿ.ಮೀ ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ ಚಾಲನೆ ನೀಡುವ ಮೂಲಕ ಓಟದಲ್ಲಿ ಭಾಗವಹಿಸಿದರು.

ಮ್ಯಾರಥಾನ್ ಓಟ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾಗಿ ಬಸವೇಶ್ವರ ವೃತ್ತ, ಚಂದ್ರಮೌಳೇಶ್ವರ ವೃತ್ತ, ಗಂಜ್ ಸರ್ಕಲ್‌ನಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನಕ್ಕೆ ಬಂದು ಮುಕ್ತಾಯವಾಯಿತು. ಓಟದಲ್ಲಿ ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು, ಮಹಿಳೆಯರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಸಾರ್ವಜನಿಕರು ಸೇರಿದಂತೆ ನೂರಾರು ಜನ ಭಾಗವಹಿಸಿದರು.

ಚಾಮರಾಜನಗರದ ಪೊಲೀಸ್ ರನ್ ಮ್ಯಾರಥಾನ್​ನಲ್ಲಿ 2 ಸಾವಿರ ಮಂದಿ: ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ‘ಕರ್ನಾಟಕ ಪೊಲೀಸ್ ರನ್’ ಶೀರ್ಷಿಕೆಯಡಿ 5 ಕಿ.ಮೀ ಮ್ಯಾರಥಾನ್ ನಡೆಯಿತು.

ಚಾಮರಾಜನಗರದಲ್ಲಿ ಪೊಲೀಸ್ ರನ್ ಮ್ಯಾರಥಾನ್ ಆಯೋಜನೆ

ಮ್ಯಾರಥಾನ್ ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭವಾಗಿ ರಾಮಸಮುದ್ರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ತಲುಪಿ, ಅಲ್ಲಿಂದ ಯೂಟರ್ನ್ ಪಡೆದು, ಭುವನೇಶ್ವರಿ ವೃತ್ತ ತಲುಪಿ ವಾಪಸ್ ಪೊಲೀಸ್ ಕವಾಯತು ಮೈದಾನದಲ್ಲಿ ಅಂತ್ಯಗೊಂಡಿತು. ಪೊಲೀಸ್ ಇಲಾಖೆಯ ನೌಕರರು, ಇತರೆ ಇಲಾಖೆಗಳ ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸೇರಿ 2 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು.

ಮ್ಯಾರಥಾನ್‍ನಲ್ಲಿ ಭಾಗವಹಿಸಿ ಮೊದಲು ಬಂದ 50 ಮಂದಿಗೆ ಪದಕಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಡಾ.ಬಿ.ಟಿ.ಕವಿತಾ, ಜಿ.ಪಂ.ಸಿಇಒ‌ ಮೋನಾ ರೋತ್ ಭಾಗಿಯಾಗಿದ್ದು ವಿಶೇಷವಾಗಿತ್ತು.

ಪದಕ ಪ್ರದಾನ ಮಾಡಿ ನಂತರ ಡಿಸಿ ಶಿಲ್ಪಾನಾಗ್ ಮಾತನಾಡಿ, “ಮನಸ್ಸು ಮತ್ತು ಶರೀರ ಆರೋಗ್ಯವಾಗಿದ್ದರೆ ಮಾತ್ರ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯ” ಎಂದರು.‌ “8 ವಯಸ್ಸಿನಿಂದ 80ರ ವಯಸ್ಸಿನ ತನಕವೂ ಫಿಟ್‌ನೆಸ್ ಮತ್ತು ಉತ್ತಮ ಆರೋಗ್ಯ ಅವಶ್ಯಕ. ಮನೆಯ ಜವಾಬ್ದಾರಿ, ಉದ್ಯೋಗದ ಒತ್ತಡದ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ” ಎಂದು ಕಿವಿಮಾತು ಹೇಳಿದರು.

ಬಳ್ಳಾರಿಯಲ್ಲಿ ಗಮನ ಸೆಳೆದ ಬೃಹತ್‌ ಮ್ಯಾರಥಾನ್‌ ಓಟ: ಡ್ರಗ್ಸ್ ಮುಕ್ತ ಕರ್ನಾಟಕದ ನಿರ್ಮಾಣಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಪೊಲೀಸರಿಂದ ನಗರದಲ್ಲಿ ಮ್ಯಾರಥಾನ್ ಓಟ ಏರ್ಪಡಿಸಲಾಗಿತ್ತು.

ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದವರು.

ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್‌‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಓಟಕ್ಕೆ ಚಾಲನೆ ನೀಡಿದರು. “ಆರೋಗ್ಯಕರವಾಗಿರಬೇಕಾದರೆ ಡ್ರಗ್ಸ್ ನಿರ್ಮೂಲನೆ ಅಗತ್ಯ, ಡ್ರಗ್ಸ್ ಮುಕ್ತ ಸಮಾಜ ರೂಪಿಸುವಲ್ಲಿ ಯುವಕ-ಯುವತಿಯರ ಜವಾಬ್ದಾರಿ ಹಿರಿದು” ಎಂದು ಅವರು ಹೇಳಿದರು.

“ಜನಜಾಗೃತಿ ಮೂಡಿಸುವ ದೃಷ್ಟಿಯಿಂದ ಆಯೋಜಿಸಲಾದ ಮ್ಯಾರಥಾನ್ ಓಟಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ” ಎಂದು ಬಳ್ಳಾರಿ ವಲಯ ಐಜಿ ಲೋಕೇಶ್​ ಹೇಳಿದ್ದಾರೆ.

ಮ್ಯಾರಥಾನ್‌ ಓಟ ನಗರದ ಕನಕದುರ್ಗಮ್ಮ ದೇವಸ್ಥಾನದ ಆವರಣದಿಂದ ಆರಂಭವಾಗಿ ಗಡಿಗಿಚನ್ನಪ್ಪ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೂಲಕ ಮೋತಿ ವೃತ್ತ, ಎಸ್ಪಿ ವೃತ್ತದಿಂದ ದುರ್ಗಮ್ಮ ವೃತ್ತ ತಲುಪಿತು.

ಕರ್ನಾಟಕ ಸ್ಟೇಟ್ ಪೊಲೀಸ್ ಮ್ಯಾರಥಾನ್: ಎರಡನೇ ಆವೃತ್ತಿಯ ಕರ್ನಾಟಕ ರಾಜ್ಯ ಪೊಲೀಸ್ ರನ್ ಮ್ಯಾರಾಥಾನ್‌ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಚಾಲನೆ ನೀಡಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ನಡೆದ ಮ್ಯಾರಥಾನ್‌ ಅನ್ನು ‘ಮಾದಕ ಮುಕ್ತ ಕರ್ನಾಟಕ’, ‘ಸೈಬರ್ ಅಪರಾಧದ ಕುರಿತು ಅರಿವು’, ‘ದೈಹಿಕ ಆರೋಗ್ಯ’ ಹಾಗೂ ‘ಹಸಿರು ಬೆಂಗಳೂರು’ ಘೋಷವಾಕ್ಯದಡಿ ಆಯೋಜಿಸಲಾಗಿತ್ತು. 10K ಹಾಗೂ 5K ವಿಭಾಗದ ಮ್ಯಾರಥಾನ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು.

ವಿಧಾನಸೌಧದ ಮುಂಭಾಗದಿಂದ ಆರಂಭಗೊಂಡ ರನ್ ಕೆ.ಆರ್.ಸರ್ಕಲ್, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಸಿದ್ಧಲಿಂಗಯ್ಯ ಸರ್ಕಲ್, ಕ್ವೀನ್ಸ್ ಸರ್ಕಲ್, ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಸರ್ಕಲ್ ಮೂಲಕ ವಿಧಾನ ಸೌಧ ತಲುಪಿತು.

ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಎಂ.ಎ.ಸಲಿಂ, ಸಂದೀಪ್ ಪಾಟೀಲ್, ಎಸ್‌ಬಿಐ ಬೆಂಗಳೂರು ಘಟಕದ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತುಮಕೂರಿನಲ್ಲಿ ಜಾಗೃತಿ ನಡಿಗೆ: “ಪ್ರಸ್ತುತ ಬದಲಾಗುತ್ತಿರುವ ಮಾಡರ್ನ್​ ಜಗತ್ತಿನಲ್ಲಿ ಡ್ರಗ್ಸ್ ಬಳಕೆ ಪಿಡುಗಾಗಿ ಪರಿಣಮಿಸಿದೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ರೀತಿ ತುಮಕೂರಿನಲ್ಲಿ ಜಾಗೃತಿ ನಡಿಗೆ ಆಯೋಜನೆ ಮಾಡಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದ್ದಾರೆ.

ನಮ್ಮ ಪೊಲೀಸ್ ನಮ್ಮ ಹೆಮ್ಮೆ ಧ್ಯೇಯ ವಾಕ್ಯದಡಿ, ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಡ್ರಗ್ಸ್ ಮತ್ತು ಸೈಬರ್ ವಂಚನೆ ವಿರುದ್ಧ ಜಾಗೃತಿ ನಡಿಗೆ ಆಯೋಜಿಸಲಾಗಿತ್ತು. 1500 ಮಂದಿ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು, ಕ್ರೀಡಾಪಟುಗಳು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಮೊದಲ 50 ಮಂದಿಗೆ ಮೆಡಲ್​​ಗಳನ್ನು ವಿತರಿಸಲಾಯಿತು. ಜಾಗೃತಿ ನಡಿಗೆಯಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಪಾಲ್ಗೊಂಡರು.

ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂಬ ಧ್ಯೇಯವಾಕ್ಯದೊಂದಿಗೆ ‘TUMAKURU RUN-5K & 10K’ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಿಂದ ಬೆಳಗ್ಗೆ 7-00 ಗಂಟೆಗೆ ಏರ್ಪಡಿಸಿದ್ದು, ಓಟವನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಉದ್ಘಾಟಿಸಿದರು.

ಎಸ್.ಎಸ್.ಸರ್ಕಲ್, ಟೌನ್ ಹಾಲ್ ಸರ್ಕಲ್, ಕಾಲ್ಟಾಕ್ಸ್ ಸರ್ಕಲ್, ಮಂಡಿ ಪೇಟೆ, ಚರ್ಚ್ ಸರ್ಕಲ್ ಮುಖಾಂತರ ಗಾಜಿನ ಮನೆಯ ಬಳಿ ಮುಕ್ತಾಯಗೊಂಡಿತು. ಮ್ಯಾರಾಥಾನ್​​ನಲ್ಲಿ ಜಿಲ್ಲೆಯ ಓಟಗಾರರು, KSRP ಅಧಿಕಾರಿ ಮತ್ತು ಸಿಬ್ಬಂದಿ ಮತ್ತು ತುಮಕೂರಿನ ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯಶಾಲಿ ಓಟಗಾರರಿಗೆ ಪದಕಗಳನ್ನು ವಿತರಿಸಲಾಯಿತು. ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ನಡೆದ ಮ್ಯಾರಥಾನ್​​ನಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ.ಮರಿಯಪ್ಪ ಮತ್ತು ಅಬ್ದುಲ್ ಖಾದರ್, ಜಿಲ್ಲೆಯ ಪೊಲೀಸ್ ಉಪಾಧೀಕ್ಷಕರುಗಳು, ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯ ಪೊಲೀಸ್ ರನ್ ಮ್ಯಾರಥಾನ್​ನಲ್ಲಿ ಭಾಗವಹಿಸಿ ವಿಜೇತರಾದವರು