ಏನಿದು ಪೂರ್ವ-ಅನುಮೋದಿತ ವೈಯಕ್ತಿಕ ಸಾಲ, ಪಡೆಯುವುದು ಹೇಗೆ?: ಯಾವುದೇ ದಾಖಲೆಗಳಿಲ್ಲದೇ ಕಡಿಮೆ ಬಡ್ಡಿ ಸಾಲ – PRE APPROVED LOAN ELIGIBILITY
ಪೂರ್ವ – ಅನುಮೋದಿತ ಸಾಲದಿಂದ ಅನೇಕ ಪ್ರಯೋಜನಗಳಿವೆ. ಕಂತೆ ಕಂತೆ ದಾಖಲೆಗಳ ಚಿಂತೆಯಿಲ್ಲ, ದೊಡ್ಡ ಬಡ್ಡಿಯ ಗೊಡವೆ ಇಲ್ಲ. ಕಮ್ಮಿ ಬಡ್ಡಿ, ಕಡಿಮೆ ದಾಖಲೆಗಳೊಂದಿಗೆ ತಕ್ಷಣವೇ ಸಾಲ ಮಂಜೂರಾತಿ!
Pre Approved Personal Loans : ಪೂರ್ವ ಅನುಮೋದಿತ ವೈಯಕ್ತಿಕ ಸಾಲದ ಕೊಡುಗೆಗಳಿಗಾಗಿ ಅನೇಕ ಜನರು ಕಾಯುತ್ತಿರುತ್ತಾರೆ. ನಿಗದಿತ ವ್ಯವಹಾರ ನಡೆಸುವವರಿಗೆ, ಹಣಕಾಸು ವ್ಯವಹಾರವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವವರಿಗೆ ಬ್ಯಾಂಕ್ ಗಳೇ ಈ ಆಫರ್ ನೀಡುತ್ತಿರುತ್ತವೆ. ಈ ವಿಚಾರ ತಿಳಿಯ ಬಯಸುವವರು, ಬ್ಯಾಂಕ್ಗಳ ಗ್ರಾಹಕ ಸೇವೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ. ಇಲ್ಲವೇ ನೀವು ಅಂತಹ ಸೌಲಭ್ಯಕ್ಕೆ ಅರ್ಹರಾಗಿದ್ದೀರಿ ಎಂದರೆ ಬ್ಯಾಂಕ್ ಗ್ರಾಹಕ ಸೇವಾ ವಿಭಾಗದವರು ಕರೆ ಮಾಡಿ ಆಫರ್ ಇರುವ ಬಗ್ಗೆ ತಿಳಿಸಿಕೊಡಬಹುದು. ಬನ್ನಿ ಹಾಗಾದರೆ ಪೂರ್ವ ಅನುಮೋದಿತ ಸಾಲದ ಕೊಡುಗೆಗಳು ಯಾವುವು? ಇದರಿಂದ ಏನು ಪ್ರಯೋಜನ? ಈ ಕೊಡುಗೆಗಳನ್ನು ಪಡೆಯುವುದು ಹೇಗೆ? ಎಂಬುದರ ಬಗ್ಗೆ ಅರಿತುಕೊಳ್ಳೋಣ.
ಪೂರ್ವ ಅನುಮೋದಿತ ಸಾಲ ಎಂದರೇನು?: ಬ್ಯಾಂಕ್ ಅಥವಾ ಎನ್ಬಿಎಫ್ಸಿಯಿಂದ ನಿಮಗೆ ಸಿಗುವ ಕೊಡುಗೆ ಆಗದೆ. ಪೂರ್ವ-ಅನುಮೋದಿತ ಸಾಲದ ಬಗ್ಗೆ ನಿಮಗೆ ಆಫರ್ ಬಂದಿದೆ ಎಂದರೆ ಬ್ಯಾಂಕ್ ಅಥವಾ NBFC ನಿಮ್ಮ ಪ್ರೊಫೈಲ್ ಅನ್ನು ಮೊದಲೇ ಪರಿಶೀಲಿಸಿದೆ ಎಂದರ್ಥ. ನೀವು ಸಾಲಕ್ಕೆ ಅರ್ಹರಾಗಿದ್ದೀರಾ ಎಂಬುದನ್ನು ಹಣಕಾಸು ಸಂಸ್ಥೆಗಳು ಮೊದಲೇ ಈ ಬಗ್ಗೆ ನಿರ್ಧರಿಸಿರುತ್ತವೆ. ನಿಮ್ಮ ಖಾತೆಗಳಲ್ಲಿನ ವ್ಯವಹಾರ ಹಾಗೂ ಶಿಸ್ತು ಪರಿಶೀಲಿಸಿದ ಬಳಿಕ ನಿಮಗೆ ಪೂರ್ವ ಅನುಮೋದಿತ ಲೋನ್ ಆಫರ್ ಸಂದೇಶವನ್ನು ಕಳುಹಿಸಲಾಗುತ್ತದೆ. ನಿಮ್ಮ KYC, ಕ್ರೆಡಿಟ್ ಸ್ಕೋರ್, ಸಾಲ ಮರುಪಾವತಿ ದಾಖಲೆ, ಆದಾಯದ ಮೂಲಗಳಂತಹ ಮಾಹಿತಿಯನ್ನು ಶೋಧಿಸಿದ ನಂತರವೇ ಈ ಸಾಲದ ಕೊಡುಗೆ ನೀಡಲಾಗುತ್ತದೆ. ಕನಿಷ್ಠ ದಾಖಲಾತಿಗಳೊಂದಿಗೆ ಈ ಸಾಲವನ್ನು ತ್ವರಿತವಾಗಿ ನೀಡಲಾಗುತ್ತದೆ.
ಪೂರ್ವ-ಅನುಮೋದಿತ ಸಾಲದ ಪ್ರಯೋಜನಗಳು ಇವು!
- ಕಡಿಮೆ ಬಡ್ಡಿ ದರ: ಪೂರ್ವ-ಅನುಮೋದಿತ ಸಾಲದ ಕೊಡುಗೆ ಅನೇಕ ಪ್ರಯೋಜನಗಳೊಂದಿಗೆ ನಿಮಗೆ ಲಭ್ಯವಾಗುತ್ತವೆ. ಈ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತದೆ. ಏಕೆಂದರೆ ಈ ಕೊಡುಗೆ ನೀಡಲು ಬ್ಯಾಂಕ್ ಆಯ್ಕೆ ಮಾಡಿದ ಎಲ್ಲ ಜನರು ಉತ್ತಮ ಆರ್ಥಿಕ ದಾಖಲೆ ಹೊಂದಿರುತ್ತಾರೆ. ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಲಾಗಿರುತ್ತದೆ. ಇಲ್ಲದಿದ್ದರೆ ಅತ್ಯಲ್ಪ ಮಾತ್ರವೇ ಹಾಕಲಾಗುತ್ತದೆ.
- ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ: ಯಾವುದೇ ದಾಖಲೆಗಳಿಲ್ಲದೇ ಅನೇಕ ಬ್ಯಾಂಕುಗಳು ಪೂರ್ವ- ಅನುಮೋದಿತ ಸಾಲವನ್ನು ನೀಡುತ್ತವೆ. ಏಕೆಂದರೆ ಆಫರ್ ಪಡೆಯುವವರ KYC ದಾಖಲೆ ಈಗಾಗಲೇ ಬ್ಯಾಂಕ್ನಲ್ಲಿ ಲಭ್ಯವಿರುತ್ತದೆ. ಒಬ್ಬ ವ್ಯಕ್ತಿ ಈಗಾಗಲೇ ಆ ಬ್ಯಾಂಕಿನಿಂದ ಸಾಲ ಪಡೆದಿದ್ದರೆ, ಅವನ ಆದಾಯದ ವಿವರಗಳು ಸಹ ಬ್ಯಾಂಕ್ನಲ್ಲಿ ಇರುತ್ತವೆ. ಆದ್ದರಿಂದ ದಾಖಲೆಗಳ ಅಗತ್ಯವಿಲ್ಲ.
- ತ್ವರಿತ ಮಂಜೂರಾತಿ: ಪೂರ್ವ ಅನುಮೋದಿತ ಸಾಲವನ್ನು ತಕ್ಷಣವೇ ಮಂಜೂರು ಮಾಡಲಾಗುತ್ತದೆ. ಈ ಕ್ರಮದಲ್ಲಿ, ಸಾಲಗಾರನು ಸಾಲದ ಅವಧಿ ಮತ್ತು EMI ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಸಾಲಗಾರನು ಅನುಮೋದನೆ ಪಡೆದ ತಕ್ಷಣ, ಹಣವನ್ನು ಅವನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಪೂರ್ವ ಅನುಮೋದಿತ ಸಾಲವನ್ನು ಪಡೆಯುವುದು ಹೇಗೆ?
- ಪೂರ್ವ ಅನುಮೋದಿತ ಸಾಲದ ಪ್ರಸ್ತಾಪ ಮಾಡುವುದು ಬ್ಯಾಂಕ್ ಅಥವಾ NBFC ಗೆ ಬಿಟ್ಟದ್ದು.
- ಬ್ಯಾಂಕ್ ಗಮನಕ್ಕೆ ಬರಲು ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಿಕೊಳ್ಳಿ. 700 ರಿಂದ 750 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಅಸ್ತಿತ್ವದಲ್ಲಿರುವ ಸಾಲದ EMI ಗಳು, ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ.
- ಹೆಚ್ಚಿನ ಸಾಲ, ಕ್ರೆಡಿಟ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಬೇಡಿ.
- ನಿಮ್ಮ ಆದಾಯದ ಸಾಲ ಮರುಪಾವತಿಯ ಪಾಲು ಶೇಕಡಾ 36ರ ಒಳಗೆ ಇದೆ ಎಂದು ಖಚಿತಪಡಿಸಿಕೊಳ್ಳಿ.
- ನೀವು ಈ ಅಂಶಗಳನ್ನು ಅನುಸರಿಸಿದರೆ ಮತ್ತು ಆರ್ಥಿಕ ಶಿಸ್ತನ್ನು ಅಭ್ಯಾಸ ಮಾಡಿದರೆ, ಭವಿಷ್ಯದಲ್ಲಿ ನೀವು ಖಂಡಿತವಾಗಿಯೂ ಪೂರ್ವ ಅನುಮೋದಿತ ಸಾಲದ ಕೊಡುಗೆಗಳನ್ನು ಪಡೆಯುತ್ತೀರಿ.