ಐಷಾರಾಮಿ ಬಂಗಲೆ ‘ಮನ್ನತ್’ನಿಂದ ಬಾಡಿಗೆ ಮನೆಗೆ ಶಾರುಖ್ ಖಾನ್ ಫ್ಯಾಮಿಲಿ ಶಿಫ್ಟ್ : ಕಾರಣ ತಿಳಿಯಿರಿ – SHAH RUKH KHAN
ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಭಾರತದ ಜನಪ್ರಿಯ ನಟ ಶಾರುಖ್ ಖಾನ್ ಮನ್ನತ್ನಿಂದ ಶಿಫ್ಟ್ ಆಗಿ ಬಾಡಿಗೆ ಮನೆಯಲ್ಲಿ ನೆಲೆಸಲಿದ್ದಾರೆ. ಇದಕ್ಕೆ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ..
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಒಡೆತನದ ಐಷಾರಾಮಿ ನಿವಾಸ ‘ಮನ್ನತ್’ ಭಾರತದ ಶ್ರೀಮಂತ ಮತ್ತು ಆಕರ್ಷಕ ಮನೆಗಳಲ್ಲೊಂದು. ಆದ್ರೀಗ ವರದಿಗಳ ಪ್ರಕಾರ, ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟನೀಗ ಮನ್ನತ್ ತೊರೆದು ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲು ಸಜ್ಜಾಗಿದ್ದಾರೆ. ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಗೆ ಶಿಫ್ಟ್ ಆಗಲು ಕಾರಣವೇನು ಅನ್ನೋದು ವರದಿಗಳಿಂದ ಬಹಿರಂಗವಾಗಿದೆ.
ವರದಿಗಳ ಪ್ರಕಾರ, ಶಾರುಖ್ ಮುಂಬೈನ ಪಾಲಿ ಹಿಲ್ಸ್‌ನಲ್ಲಿರುವ ಬಾಲಿವುಡ್‌ನ ಭಗ್ನಾನಿ ಕುಟುಂಬದ ಎರಡು ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ನಿರ್ಮಾಪಕ ಜಾಕಿ ಭಗ್ನಾನಿ ಅವರಿಗೆ ಸೇರಿದ್ದು, ಇನ್ನೊಂದು ಅವರ ಸಹೋದರಿ ದೀಪ್ಶಿಖಾ ದೇಶ್ಮುಖ್ ಅವರಿಗೆ ಸೇರಿದೆ. ಮನ್ನತ್‌ನಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಶಾರುಖ್ ಅಲ್ಲಿಂದ ಶಿಫ್ಟ್ ಆಗುತ್ತಿದ್ದಾರೆ. ಮನ್ನತ್ ಗ್ರೇಡ್ III ಹೆರಿಟೇಜ್ ಸ್ಟ್ರಕ್ಚರ್ ಆಗಿರೋ ಹಿನ್ನೆಲೆ, ಇಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಬೇಕೆಂದರೂ ಅನುಮತಿ ಪಡೆಯಬೇಕು. ಹಾಗಾಗಿ ನಟ ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ ಎಂದು ವರದಿಗಳು ಸೂಚಿಸಿವೆ.
ಎರಡೂ ಅಪಾರ್ಟ್‌ಮೆಂಟ್‌ಗಳ ಮಾಸಿಕ ಬಾಡಿಗೆ 24.15 ಲಕ್ಷ ರೂಪಾಯಿ. ಫೆಬ್ರವರಿ 14 ರಂದು ಲೀಸ್ ಅಗ್ರಿಮೆಂಟ್ ರಿಜಿಸ್ಟರ್ ಆಗಿದೆ. ಒಪ್ಪಂದವು 2.22 ಲಕ್ಷ ರೂಪಾಯಿಯ ಮುದ್ರಾಂಕ ಶುಲ್ಕ ಮತ್ತು 2,000 ರೂಪಾಯಿಗಳ ನೋಂದಣಿ ಮೊತ್ತವನ್ನು ಒಳಗೊಂಡಿದೆ. ಎರಡೂ ಮನೆಗಳು ಪಾಲಿ ಹಿಲ್‌ನಲ್ಲಿರುವ ಪೂಜಾ ಕಾಸಾ ಕಟ್ಟಡದಲ್ಲಿವೆ.
2024ರ ನವೆಂಬರ್ನಲ್ಲಿ, ಶಾರುಖ್ ಪತ್ನಿ ಗೌರಿ ಖಾನ್ ಅವರು ಮನ್ನತ್‌ನ (ತಮ್ಮ ಬಂಗಲೆ/ಮನೆ) ಒಂದು ಭಾಗವನ್ನು ವಿಸ್ತರಿಸಲು ಮಹಾರಾಷ್ಟ್ರ ಕೋಸ್ಟಲ್ ಝೋನ್ ಮ್ಯಾನೇಜ್ಮೆಂಟ್ ಅಥಾರಿಟಿಯಿಂದ ಅನುಮತಿ ಕೋರಿದ್ದರು. ಇದರಲ್ಲಿ, ಮನ್ನತ್ ಹಿಂದಿರುವ 6 ಮಹಡಿಗಳ ಅನೆಕ್ಸ್ ಕಟ್ಟಡಕ್ಕೆ ಎರಡು ಮಹಡಿಗಳನ್ನು ಸೇರಿಸಲು ಅನುಮತಿ ಕೋರಲಾಗಿತ್ತು. ಇದು ಮನೆಯ ವಿಸ್ತೀರ್ಣವನ್ನು 616.02 ಚದರ್ ಮೀಟರ್‌ಗೆ ಹೆಚ್ಚಿಸುತ್ತದೆ. ಇಡೀ ಪ್ರಾಜೆಕ್ಟ್ನ ವೆಚ್ಚ 25 ಕೋಟಿ ರೂಪಾಯಿ. ಮನ್ನತ್ ನವೀಕರಣಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದ್ರೆ ವರದಿಗಳ ಪ್ರಕಾರ, ಶಾರುಖ್ ಕನಿಷ್ಠ 2 ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ವಾಸಿಸಬೇಕಾಗುತ್ತದೆ.
ಸಿನಿಮಾ ಬಗ್ಗೆ ಗಮನಿಸೋದಾದರೆ, ಶಾರುಖ್ ಖಾನ್ ಕೊನೆಯದಾಗಿ ರಾಜ್‌ಕುಮಾರ್ ಹಿರಾನಿ ಅವರ ಡಂಕಿ ಚಿತ್ರದಲ್ಲಿ ಕಾಣಿಸಿಕೊಂಡರು. ವಿಕ್ಕಿ ಕೌಶಲ್ ಮತ್ತು ತಾಪ್ಸಿ ಪನ್ನು ಅವರಂತಹ ಖ್ಯಾತ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರ 2023ರ ಡಿಸೆಂಬರ್ನಲ್ಲಿ ಬಿಡುಗಡೆಯಾಯಿತು. ಅದೇ ವರ್ಷ ಪಠಾಣ್ ಮತ್ತು ಜವಾನ್ನಂತಹ ಬ್ಲಾಕ್ಬಸ್ಟರ್ ಚಿತ್ರಗಳನ್ನು ಎಸ್ಆರ್ಕೆ ನೀಡಿದ್ದರು. ಇದು ಬಾಕ್ಸ್ ಆಫೀಸ್ ಅನೇಕ ದಾಖಲೆಗಳನ್ನು ಪುಡಿಗಟ್ಟಿದೆ. ಅವರ ಮುಂಬರುವ ಚಿತ್ರ ‘ಕಿಂಗ್’ ಎಂದು ವರದಿಯಾಗಿದೆ.