‘ನನ್ನ ಅತ್ತೆ ಸಾಯಿಸಲು ಐಡಿಯಾ ಕೊಡಿ’: ವೈದ್ಯನಿಗೆ ಮೆಸೇಜ್ ಕಳಿಸಿದ ಸೊಸೆ – WOMAN ASKED FOR IDEA TO KILL
ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರನ್ನು ಸಾಯಿಸಲು ಯಾವುದಾದರೂ ಐಡಿಯಾ ಕೊಡಿ ಎಂದು ಮಹಿಳೆಯೊಬ್ಬರು ವೈದ್ಯರೊಬ್ಬರ ಬಳಿ ಸಲಹೆ ಕೇಳಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು: ಅತ್ತೆಯನ್ನು ಸಾಯಿಸಲು ಮಾತ್ರೆಯ ಕುರಿತು ಸಲಹೆ ನೀಡುವಂತೆ ಮಹಿಳೆಯೊಬ್ಬರು ವೈದ್ಯರೊಬ್ಬರ ಬಳಿ ಕೇಳಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೈದ್ಯ ಸುನಿಲ್ ಕುಮಾರ್ ಎಂಬವರಿಗೆ ಮೆಸೇಜ್ ಕಳುಹಿಸಿರುವ ಮಹಿಳೆಯೊಬ್ಬರು, ತಮ್ಮ ಅತ್ತೆಯನ್ನು ಸಾಯಿಸಲು ಮಾತ್ರೆಯ ವಿವರ ಕೊಡುವಂತೆ ಕೇಳಿದ್ದಾರೆ. ಮಹಿಳೆಯ ಮಾತು ಕೇಳಿ ಆತಂಕಗೊಂಡ ವೈದ್ಯ ಸುನಿಲ್ ಕುಮಾರ್ ಅವರು ಸಂಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಇನ್‌ಸ್ಟಾಗ್ರಾಂ ಮೂಲಕ ಸುನಿಲ್ ಕುಮಾರ್ ಅವರ ನಂಬರ್ ಪಡೆದಿದ್ದ ಮಹಿಳೆ, ಸೋಮವಾರ ವಾಟ್ಸ್ಆ್ಯಪ್‌ನಲ್ಲಿ ಮೆಸೇಜ್ ಮಾಡಿದ್ದಾರೆ. ‘ನಮ್ಮ ಅತ್ತೆಗೆ ವಯಸ್ಸಾಗಿದೆ, ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರನ್ನು ಸಾಯಿಸಲು ಯಾವುದಾದರೂ ಐಡಿಯಾ ಹೇಳಿ, ಟ್ಯಾಬ್ಲೆಟ್ ಕುರಿತು ಮಾಹಿತಿ ಕೊಡಿ’ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್ ‘ನಾವು ಪ್ರಾಣ ಉಳಿಸುವವರು’ ಎಂದಿದ್ದಾರೆ. ತಕ್ಷಣ ತನ್ನ ಮೆಸೇಜ್‌ಗಳನ್ನ ಡಿಲೀಟ್ ಮಾಡಿರುವ ಮಹಿಳೆ ಸುನಿಲ್ ಕುಮಾರ್ ಅವರ ನಂಬರ್ ಬ್ಲಾಕ್ ಮಾಡಿದ್ದಾರೆ. ಇದೊಂದು ಪ್ರಾಂಕ್ ಸಂದೇಶವೋ ಅಥವಾ ಅಸಲಿ ಉದ್ದೇಶವೋ ಎಂಬುದು ತಿಳಿಯದೇ, ಗೊಂದಲಕ್ಕೀಡಾಗಿರುವ ಸುನಿಲ್ ಕುಮಾರ್ ಮಹಿಳೆಯ ಕುರಿತು ಸಂಜಯನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.
”ಮೆಸೇಜ್‌ಗಳನ್ನು ಕಳುಹಿಸಿರುವ ನಂಬರ್ ಸ್ವಿಚ್ಡ್ ಆಫ್ ಆಗಿದೆ. ಪ್ರಾಂಕ್ ಮೆಸೇಜ್ ಆಗಿರಬಹುದು ಎಂದು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸುನಿಲ್ ಕುಮಾರ್ ಅವರು ನೀಡಿರುವ ಮಾಹಿತಿಯ ಅನ್ವಯ ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:
ವಯಸ್ಸಿಗೆ ತಕ್ಕಂತೆ ದಿನಕ್ಕೆಷ್ಟು ಗಂಟೆ ನಿದ್ರಿಸಬೇಕು? ಆರಾಮದಾಯಕ ನಿದ್ರೆಗೆ ತಜ್ಞರ ಟಿಪ್ಸ್