ಯುವತಿಯರಿಗೆ ಮೆಸೇಜ್​ ವದಂತಿ – ಮೌನ ಮುರಿದ ಖ್ಯಾತ ನಟ ಆರ್​ ಮಾಧವನ್ – R MADHAVAN

 

ಯುವತಿಯರಿಗೆ ಮೆಸೇಜ್​ ವದಂತಿ – ಮೌನ ಮುರಿದ ಖ್ಯಾತ ನಟ ಆರ್​ ಮಾಧವನ್ – R MADHAVAN

ಸೋಷಿಯಲ್​ ಮೀಡಿಯಾ ಮೂಲಕ ಯುವತಿಯರಿಗೆ ಆರ್​ ಮಾಧವನ್ ಮೆಸೇಜ್​ ಮಾಡುತ್ತಾರೆಂಬ ವದಂತಿ ಹರಡಿತ್ತು. ಈ ಬಗ್ಗೆ ಖ್ಯಾತ ನಟ ಪ್ರತಿಕ್ರಿಯಿಸಿದ್ದಾರೆ.

coutesy : google

ಕೆಲ ತಿಂಗಳ ಹಿಂದೆ ನಟ ಆರ್. ಮಾಧವನ್ ಹಾಗೂ ಮಹಿಳಾ ಅಭಿಮಾನಿಗಳ ನಡುವಿನ ಚಾಟ್ಸ್ ರೆಡ್ಡಿಟ್‌ನಲ್ಲಿ ಕಾಣಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಮೆಸೇಜ್​ನ ಸ್ಕ್ರೀನ್‌ಶಾಟ್‌ಗಳ ಬಗ್ಗೆ ಚರ್ಚೆ ಶುರುವಾಗಿ, ಮಾಧವನ್ ಅವರು ಸೋಷಿಯಲ್​ ಮೀಡಿಯಾದಲ್ಲಿ ‘ಯುವತಿಯರಿಗೆ ರಿಪ್ಲೇ ಮಾಡುತ್ತಿದ್ದಾರೆ’ ಎಂಬ ಮಾತುಗಳು ಕೇಳಿಬಂದವು. ಇದೀಗ, ಮಾಧವನ್ ಆ ಎಲ್ಲಾ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಭಿಮಾನಿಗಳಿಗೆ ಕೊಡುವ ಸರಳ ರಿಪ್ಲೇಗಳನ್ನು ಎಷ್ಟು ತಪ್ಪಾಗಿ ಅರ್ಥೈಸಬಹುದು ಎಂಬುದರ ಬಗ್ಗೆ ತಮ್ಮ ಹತಾಶೆ ವ್ಯಕ್ತಪಡಿಸಿದರು.

ಅಭಿಮಾನಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಅವರ ನಟನೆಯನ್ನು ಶ್ಲಾಘಿಸಿ, ಹಾರ್ಟ್ ಎಮೋಜಿಗಳುಳ್ಳ ಸಂದೇಶವನ್ನು ಕಳುಹಿಸಿದ ನಂತರ ವಿವಾದ ಶುರುವಾಯಿತು. ಮಾಧವನ್ ಅವರಿಗೆ “ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದರು. ಅಭಿಮಾನಿ ಈ ಮೆಸೇಜ್​ನ ಸ್ಕ್ರೀನ್​ಶಾಟ್​ ಅನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡರು. ನಟ ನಿರ್ದಿಷ್ಟವಾಗಿ ಆ ಎಮೋಜಿಗಳಿಗೆ ಪ್ರತಿಕ್ರಿಯಿಸಿದ್ದಾರೆ ಎಂದು ಕೆಲವರು ಊಹಿಸಿದರು. ಈ ಬಗ್ಗೆ ಅಂತೆಕಂತೆಗಳು ಶುರುವಾದವು.

ಇತ್ತೀಚೆಗೆ ಒಂದು ಆ್ಯಪ್ ಲಾಂಚ್​ ಈವೆಂಟ್​ನಲ್ಲಿ ಮಾಧವನ್ ಹಾಜರಿದ್ದ ಸಂದರ್ಭ, ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಮೆಸೇಜ್​​, ರಿಪ್ಲೇ ಮಾಡುವ ಬಗ್ಗೆ ಅವರಲ್ಲಿ ಕೇಳಲಾಯಿತು. ವಿಷಯವನ್ನು ವಿವರಿಸಿದ ಅವರು, “ನಾನೋರ್ವ ನಟ. ನನಗೆ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಸಂದೇಶ ಕಳುಹಿಸುತ್ತಿರುತ್ತಾರೆ. ನಾನು ನಿಮಗೆ ಒಂದು ಸರಳ ಉದಾಹರಣೆಯನ್ನು ಹೇಳಲಿಚ್ಛಿಸುತ್ತೇನೆ. ಓರ್ವ ಯುವತಿ ನನಗೆ ಮೆಸೇಜ್​ ಮಾಡುತ್ತಾರೆ – ‘ನಾನು ಈ ಸಿನಿಮಾ ವೀಕ್ಷಿಸಿದೆ. ನನಗಿದು ನಿಜವಾಗಿಯೂ ಇಷ್ಟವಾಯಿತು. ನೀವು ಅದ್ಭುತ ನಟ. ಚೆನ್ನಾಗಿ ನಿರ್ವಹಿಸಿದ್ದೀರಿ. ನೀವು ನನ್ನನ್ನು ಮೋಟಿವೇಟ್​ ಮಾಡಿದ್ರಿ’ ಎಂದು ಬರೆದು ಕೊನೆಯಲ್ಲಿ, ಸಾಕಷ್ಟು ಹಾರ್ಟ್, ಕಿಸ್​, ಲವ್​ ಸಿಂಬಲ್​ಗಳನ್ನು ಬಳಸಿದ್ದರು. ಇಷ್ಟು ವಿವರವಾಗಿ ಮಾತನಾಡುವ ಅಭಿಮಾನಿ ಇದ್ದಾಗ, ನಾನು ಉತ್ತರಿಸಲ್ಪಡುತ್ತೇನೆ. ಹಾಗಾಗಿ, ನಾನು ಯಾವಾಗಲೂ ‘ಥ್ಯಾಂಕ್​ ಯು ಸೋ ಮಚ್​’ ಎಂದು ಹೇಳುತ್ತೇನೆ. ”ಥ್ಯಾಂಕ್​ ಯು ಸೋ ಮಚ್​, ವೆರಿ ಕೈಂಡ್​ ಆಫ್​ ಯೂ. ಗಾಡ್ ಬ್ಲೆಸ್​​ ಯು’ ಎಂಬುದು ನನ್ನ ರಿಪ್ಲೇ ಆಗಿತ್ತು. ನಂತರ, ಅವರು ನನ್ನ ರಿಪ್ಲೇಯ ಸ್ಕ್ರೀನ್‌ಶಾಟ್ ತೆಗೆದು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ರು. ಈ ಸಂದರ್ಭ ಜನ ನೋಡೋದೇನು? ಹಾರ್ಟ್, ಕಿಸ್​, ಲವ್​ ಸಿಂಬಲ್​ಗಳು ಎಂದು ತಿಳಿಸಿದರು.

“ತಪ್ಪಾಗಿ ಅರ್ಥೈಸಿಕೊಳ್ಳುವ ಭಯದಿಂದಾಗಿ ಹೆಚ್ಚು ಜಾಗರೂಕನಾಗಿದ್ದೇನೆ” ಎಂದು ಮಾಧವನ್ ಈ ವೇಳೆ ತಿಳಿಸಿದರು. “ಅದಕ್ಕೆ (ಎಮೋಜಿ) ಉತ್ತರಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ಸಂದೇಶಕ್ಕೆ ಉತ್ತರಿಸುವುದು ನನ್ನ ಉದ್ದೇಶ ಆಗಿತ್ತು. ಆದ್ರೆ ಆ ಸಿಂಬಲ್​ ಅನ್ನು ಮಾತ್ರ ನೋಡಿ ‘ಓ ಮ್ಯಾಡಿ ಚಿಕ್ಕ ಹುಡುಗಿಯರೊಂದಿಗೆ ಮಾತನಾಡುತ್ತಿದ್ದಾರೆ’ ಎಂದು ಜನ ಹೇಳುತ್ತಾರೆಂದು ತಮ್ಮ ಅಸಮಾಧಾನವನ್ನು ನಟ ಹೊರಹಾಕಿದರು.