ಸಿನಿಮಾಗಳು ಮೌಢ್ಯ ಬಿತ್ತಬಾರದು : ಸಿಎಂ ಸಿದ್ದರಾಮಯ್ಯ – CM SIDDARAMAIAH

 

ಸಿನಿಮಾಗಳು ಮೌಢ್ಯ ಬಿತ್ತಬಾರದು : ಸಿಎಂ ಸಿದ್ದರಾಮಯ್ಯ – CM SIDDARAMAIAH

ಬೆಂಗಳೂರು: ”ಮೌಢ್ಯಗಳನ್ನು ಬಿತ್ತುವ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ ಸಿನಿಮಾಗಳು ಸಮಾಜಕ್ಕೆ ಒಳ್ಳೆಯದಲ್ಲ. ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಸಿನಿಮಾಗಳು ಮತ್ತೆ ಮೌಢ್ಯಗಳನ್ನು ಬಿತ್ತುವುದಕ್ಕೆ ಹೋಗಬಾರದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್​​ನ ಸಂಭ್ರಮದ ಕಾರ್ಯಕ್ರಮದಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ”ಡಾ.ರಾಜ್​​ಕುಮಾರ್ ಅವರ ಸಿನಿಮಾಗಳಲ್ಲಿದ್ದ ಮೌಲ್ಯಗಳು ಮತ್ತು ಘನತೆ ಈಗಿನ ಸಿನಿಮಾಗಳಲ್ಲಿ ಕಾಣುತ್ತಿಲ್ಲ. ರಾಜ್​​ಕುಮಾರ್ ಸಿನಿಮಾಗಳಲ್ಲಿ ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳು ತುಂಬಿರುತ್ತಿದ್ದವು. ಹೀಗಾಗಿ, ಸರ್ವರಿಗೂ ಇವರ ಸಿನಿಮಾಗಳು ಇಷ್ಟ ಆಗುತ್ತಿದ್ದವು” ಎಂದರು.

”ಈಗ ತಂತ್ರಜ್ಞಾನ ಬೆಳೆದು ಕೃತಕ ಬುದ್ಧಿಮತ್ತೆವರೆಗೂ ಬಂದಿದೆ. ನಮ್ಮ ಬದುಕನ್ನು ಪ್ರತಿಬಿಂಬಿಸುವ, ನಮ್ಮ ತಳಮಳಗಳಿಗೆ ಪರಿಹಾರ ಹುಡುಕುವ ಸಿನಿಮಾಗಳು ಬಂದಾಗ ಅಂತಹ ಸಿನಿಮಾಗಳು ಶಾಶ್ವತವಾಗಿ ಸಮಾಜದಲ್ಲಿ ಉಳಿಯುತ್ತವೆ. ಬೆಂಗಳೂರು, ಕರ್ನಾಟಕವೇ ಒಂದು ಜಗತ್ತು. ಇಲ್ಲಿ ಎಲ್ಲವೂ ಇದೆ. ತಂತ್ರಜ್ಞಾನದ ಅವಕಾಶಗಳನ್ನು ಬಳಸಿಕೊಂಡು ಉತ್ತಮ‌ ಸಿನಿಮಾಗಳನ್ನು ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಸಿನಿಮಾ ಕ್ಷೇತ್ರವೂ ಪ್ರಗತಿ ಕಾಣುತ್ತದೆ. ಈ ದಿಕ್ಕಿನಲ್ಲಿ ಸಿನಿಮಾ ಜಗತ್ತು ಮಾನವೀಯಗೊಳ್ಳಲಿ” ಎಂದು ಹಾರೈಸಿದರು.



ಮೈಸೂರಿನಲ್ಲಿ ವಿಶ್ವದರ್ಜೆಯ ಫಿಲ್ಮ್ ಸಿಟಿ ನಿರ್ಮಾಣ : ”ವಿಶ್ವದರ್ಜೆಯ ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿ ನಿರ್ಮಿಸುತ್ತೇವೆ. ಇದಕ್ಕಾಗಿ ಈಗಾಗಲೇ 150 ಎಕರೆ ಜಾಗವನ್ನು ನೀಡಲಾಗಿದೆ. ಕರ್ನಾಟಕವೇ ಒಂದು ಜಗತ್ತು. ಇಲ್ಲಿ ಎಲ್ಲ ಅವಕಾಶಗಳನ್ನು ಸೃಷ್ಟಿಸಬಹುದು. ಇದಕ್ಕಾಗಿ ಫಿಲ್ಮ್ ಸಿಟಿ ನಿರ್ಮಿಸುತ್ತಿದ್ದೇವೆ. ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಸೆಯುವ ಸಿನಿಮಾಗಳು ವಿಶ್ವದರ್ಜೆಯ ಗುಣಮಟ್ಟದಲ್ಲಿ ಇಲ್ಲಿ ನಿರ್ಮಾಣ ಆಗಬೇಕು” ಎಂದು ಸಿಎಂ ಆಶಿಸಿದರು.

ಇದನ್ನು ಓದಿ

”ನಮ್ಮಲ್ಲಿ ಅಸಹನೆ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಅಸಂತೋಷ ಹೆಚ್ಚುತ್ತಿದೆ. ಸಂಪತ್ತಿನ ಅಸಮಾನ ಹಂಚಿಕೆ ಈ ಅಸಂತೋಷಕ್ಕೆ ಕಾರಣ. ದೇಶದ 1% ಜನರ ಕೈಯಲ್ಲಿ ದೇಶದ 50% ಸಂಪತ್ತು ಸೇರಿಕೊಂಡಿದೆ. ಸಂಪತ್ತಿನ ಈ ವಿಪರೀತ ಅಸಮಾನ ಹಂಚಿಕೆ ಸಮಾಜದಲ್ಲಿ ಅಸಂತೋಷ ಹೆಚ್ಚುತ್ತಿದೆ. ಇದಕ್ಕೆ ಕಲಾ ಮಾಧ್ಯಮ ಆಗಿರುವ ಸಿನಿಮಾಗಳು ಪರಿಹಾರ ಹುಡುಕಬೇಕು. ಸಮಾಜವನ್ನು ಕಲಾ ಮಾಧ್ಯಮದ ಮೂಲಕ ಬೆಸೆಯಬೇಕು” ಎಂದು ಸಲಹೆ ನೀಡಿದರು.