64ನೇ ವಯಸ್ಸಿನಲ್ಲಿ MAದಲ್ಲಿ ಟಾಪರ್ ಆದ ರೈತ: ಇವರಿಗಿದೆ PhDಯನ್ನೂ ಮಾಡುವ ಆಸೆ! – FARMER COMPLETED MASTERS
ಪಶ್ಚಿಮ ಬಂಗಾಳದ ರೈತರೊಬ್ಬರು 64ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಕುರಿತು ವರದಿ ಇಲ್ಲಿದೆ.
ಶಾಂತಿಪುರ(ಪಶ್ಚಿಮ ಬಂಗಾಳ): ಕಲಿಕೆಗೆ ವಯಸ್ಸಿಲ್ಲ ಎಂಬ ಮಾತಿದೆ. ಇದಕ್ಕೆ ಉದಾಹರಣೆ ಎಂಬಂತೆ, ನಾಡಿಯಾ ಜಿಲ್ಲೆಯ ಲಕ್ಷ್ಮೀನಾಥಪುರದ ರೈತರೊಬ್ಬರು 64ನೇ ವಯಸ್ಸಿನಲ್ಲಿ ಎಂ.ಎ ಬಂಗಾಳಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು, ರೈತ ಬಿಶ್ವನಾಥ್ ಪ್ರಾಮಾಣಿಕ್ ಅವರು ಬಾಲ್ಯದಿಂದಲೂ ಅನೇಕ ಕಷ್ಟಗಳ ನಡುವೆ ಬೆಳೆದು ಬಂದಿದ್ದು, ಮದುವೆಯಾಗಿಲ್ಲ. ತನ್ನ ಮೃತ ಸಹೋದರನ ಪತ್ನಿ ಮತ್ತು ಮಕ್ಕಳು ಸೇರಿದಂತೆ ಇಡೀ ಕುಟುಂಬ ನಿರ್ವಣೆಯ ಜವಾಬ್ದಾರಿ ಹೂತ್ತಿರುವ ಬಿಶ್ವನಾಥ್ ಅವರಿಗೆ ಕಲಿಯುವ ದಾಹ ಮಾತ್ರ ಇನ್ನೂ ತಣಿದಿಲ್ಲ.
ಬಡತನದ ಕಾರಣದಿಂದ ಬಿಶ್ವನಾಥ್ ಅವರ ವಿದ್ಯಾಭ್ಯಾಸ ಹತ್ತನೇ ತರಗತಿಗೆ ಮೊಟಕುಗೊಂಡಿತು. ಆದರೆ, ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬ ಮಾತನ್ನು ಗಂಭೀರವಾಗಿ ತೆಗೆದುಕೊಂಡು ಕಲಿಕೆಯತ್ತ ಗಮನಹರಿಸಿದರು. ಬಿಸಿಲು, ಮಳೆ ಎನ್ನದೇ ಕೃಷಿ ಕೆಲಸ ಮಾಡುವುದರ ಜೊತೆ ಜೊತೆಗೆ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ರವೀಂದ್ರ ಮುಕ್ತ ವಿದ್ಯಾಲಯದಿಂದ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ತದನಂತರ ಅವರಿಗೆ ಓದುವ ಉತ್ಸಾಹ ಮತ್ತಷ್ಟು ಹೆಚ್ಚಾಯಿತು.
ನಾವೂ ಊಹಿಸಿರಲಿಲ್ಲ: ” 64 ವರ್ಷ ವಯಸ್ಸಿನಲ್ಲಿ ಎಂ.ಎ ಪದವಿ ಪಡೆದು ಬಿಶ್ವನಾಥ್ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಬಿಶ್ವನಾಥ್ ಅವರ ಶಿಕ್ಷಣದ ಮೇಲಿನ ಆಸಕ್ತಿ ಯುವಜನತೆ ಆದರ್ಶವಾಗಲಿದೆ. ಬಿಶ್ವನಾಥ್ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ ಎಂದು ಅಧ್ಯಾಪಕರಾಗಿ ನಾವು ಊಹಿಸಿರಲಿಲ್ಲ. ನಾವು ಅವರನ್ನು ಎಷ್ಟು ಅಭಿನಂದಿಸಿದರೂ ಅದು ಕಡಿಮೆಯೇ. ಅವರ ಪ್ರಯತ್ನಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಬಿಶ್ವನಾಥ್ ಬಂಗಾಳಿ ವಿಷಯದಲ್ಲಿ ಪಿಎಚ್‌ಡಿ ಮಾಡಲು ಬಯಸಿದ್ದಾರೆ, ಇದು ಒಳ್ಳೆಯ ವಿಷಯ” ಎಂದು ನೇತಾಜಿ ಸುಭಾಷ್ ಮುಕ್ತ ವಿಶ್ವವಿದ್ಯಾಲಯದ ಅಧ್ಯಾಪಕರು ಹೇಳಿದ್ದಾರೆ.
ಈತ ಗ್ರಾಮಸ್ಥರ ನೆಚ್ಚಿನ ವಿಶ್ವಕರ್ಮ: ಜಾಕ್ ಆಫ್ ಆಲ್ ಟ್ರೆಡ್ಸ್ ಮಾಸ್ಟರ್ ಆಫ್ ನನ್ ಎಂಬ ಮಾತು ಇವರಿಗೆ ಅನ್ವಯವಾಗುತ್ತೆ. ಏಕೆಂದರೆ ಬಿಶ್ವನಾಥ್ ಅವರಿಗೆ ಗೊತ್ತಿಲ್ಲದ ಕೆಲಸವಿಲ್ಲ. ಅವರು ಎಲ್ಲದಕ್ಕೂ ಸೈ ಎನ್ನುತ್ತಾರೆ. ಅವರು ವಾಹನಗಳ ರಿಪೇರಿ ಮಾಡುತ್ತಾರೆ. ಮೇಸ್ತ್ರಿಯಂತೆ ಮನೆಗಳನ್ನು ನಿರ್ಮಿಸುತ್ತಾರೆ. ಹೊಲದಲ್ಲಿ ಕೃಷಿ ಮಾಡುತ್ತಾರೆ. ಅದಕ್ಕಾಗಿಯೇ ಬಿಶ್ವನಾಥ್ ಅವರನ್ನು ಗ್ರಾಮಸ್ಥರು ವಿಶ್ವಕರ್ಮ ಎಂದು ಕರೆಯುತ್ತಾರೆ.
ಇವರಿಗೆ ಬತ್ತದ ಉತ್ಸಾಹ, ಕಲಿಯುವ ಆಸಕ್ತಿ: ಗ್ರಾಮಸ್ಥರ ಸೌಮೆನ್ ಸರ್ಕಾರ್ ಮಾತನಾಡಿ, “ಬಿಶ್ವನಾಥ್ ಅವರು ದಿನದ ಬಹುತೇಕ ಸಮಯ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಅವರಿಗೆ ಕಲಿಕೆಯುವ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ. ಕೃಷಿ ಕೆಲಸ ಮಾಡಿದ ನಂತರವೂ, ವಿರಾಮ ಸಿಕ್ಕಾಗಲೆಲ್ಲಾ ನೆಲದ ಮೇಲೆ ಕುಳಿತು ಪುಸ್ತಕ ಓದುತ್ತಾರೆ. ಯುವಜನರು ಅವರಿಂದ ಪ್ರೇರಣೆಗೊಂಡು ಶಿಕ್ಷಣದ ಮಹತ್ವ ಅರಿಯಬೇಕು” ಎಂದರು.
ಶಾಲೆ ಬಿಟ್ಟವರು ಮತ್ತೆ ಶಿಕ್ಷಣದತ್ತ ಗಮನಹರಿಸಲಿ: “ನನ್ನ ಸ್ನೇಹಿತರು ವಿದ್ಯಾವಂತರು. ನನ್ನ ಸಹೋದರನಿಗೂ ಓದುವುದು ತಿಳಿದಿತ್ತು. ಹಾಗಾಗಿ ನಾನೂ ಶಿಕ್ಷಣ ಪಡೆಯಬೇಕು ಎಂಬ ಆಸೆ ಇತ್ತು. ಹಾಗಾಗಿ ನಾನು ಎಂಎ ಮುಗಿಸಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ಕೃಷಿ ಮಾಡುತ್ತಲೇ ನಾನು ನನ್ನ ಅಧ್ಯಯನ ಮುಂದುವರಿಸಿದ್ದೇನೆ. ಪ್ರಸ್ತುತ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಶಿಕ್ಷಣವು ಜನರನ್ನು ವಿನಮ್ರ ಮತ್ತು ಸಭ್ಯರನ್ನಾಗಿ ಮಾಡುತ್ತದೆ. ಆದ್ದರಿಂದ ಶಿಕ್ಷಣವು ಮುಖ್ಯವಾಗಿದೆ. ಶಾಲೆ ಬಿಟ್ಟವರಿಗೆ ಮತ್ತೆ ಶಿಕ್ಷಣದತ್ತ ಗಮನಹರಿಸಲು ನಾನು ಹೇಳಲು ಬಯಸುತ್ತೇನೆ” ಎಂದು ಬಿಶ್ವನಾಥ್ ಹೇಳಿದರು.