ಮಹಾಕುಂಭದಿಂದ ವಾಪಸ್ ಬರುವಾಗ ಭೀಕರ ಅಪಘಾತ: ಗೋಕಾಕ್​ನ 6 ಜನ ಸ್ಥಳದಲ್ಲೇ ಸಾವು – GOKAK RESIDENTS DIED

 

ಮಹಾಕುಂಭದಿಂದ ವಾಪಸ್ ಬರುವಾಗ ಭೀಕರ ಅಪಘಾತ: ಗೋಕಾಕ್​ನ 6 ಜನ ಸ್ಥಳದಲ್ಲೇ ಸಾವು – GOKAK RESIDENTS DIED

ಪ್ರಯಾಗ್​ರಾಜ್​ ಮಹಾಕುಂಭ ಮೇಳಕ್ಕೆ ತೆರಳಿದ್ದ ಗೋಕಾಕ್​ನ​ 6 ಜನರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.

ಮಧ್ಯಪ್ರದೇಶದ ಜಬಲ್ಪುರದಲ್ಲಿ ಅಪಘಾತ
ಮಧ್ಯಪ್ರದೇಶದ ಜಬಲ್ಪುರದಲ್ಲಿ ಅಪಘಾತ 

ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್​ ಮೂಲದ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ಗೋಕಾಕ್​ನಿಂದ ಪ್ರಯಾಗ್​ರಾಜ್​ಗೆ ಕ್ರೂಸರ್​ನಲ್ಲಿ ಇವರೆಲ್ಲ ತೆರಳಿದ್ದರು. ಮಹಾಕುಂಭದಲ್ಲಿ ಪುಣ್ಯಸ್ನಾನ ಮಾಡಿ ರಾಜ್ಯಕ್ಕೆ ವಾಪಸ್ ಬರುವಾಗ ಬಸ್ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.

ಘಟನೆಯಲ್ಲಿ ಆರು ಜನ ಸ್ಥಳದಲ್ಲೇ ಮೃತಪಟ್ಟರೆ, ಹಲವರು ಗಾಯಗೊಂಡಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹತ್ತಿರದ ಸಿಹೋರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಬಲ್ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

ಕ್ರೂಸರ್​ನಲ್ಲಿ ಪ್ರಯಾಗರಾಜ್​ಗೆ ತೆರಳಿದ್ದ ಗೋಕಾಕ್ ಮೂಲದ ಇವರು ಕುಂಭಮೇಳದಲ್ಲಿ ಭಾಗಿಯಾಗಿ ವಾಪಸ್ ಊರಿಗೆ ಮರಳುತ್ತಿದ್ದರು. ಈ ವೇಳೆ ಮಧ್ಯಪ್ರದೇಶದ ಜಬಲ್ಪುರದ ಸಿಹೋರಾ ಬಳಿ ಕ್ರೂಸರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರಿನ ರಸ್ತೆಗೆ ನುಗ್ಗಿದೆ. ಆಗ ಆ ಕಡೆಯಿಂದ ಬರುತ್ತಿದ್ದ ಬಸ್ ಮತ್ತು ಕ್ರೂಸರ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ವಾಹನ ಅಪ್ಪಚ್ಚಿಯಾಗಿದೆ.

ಅಪಘಾತದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಸಿಹೋರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಮೃತರನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.