’ಛಾವಾ’ ಸಿನಿಮಾದಲ್ಲಿ ನಿಧಿ ಉಲ್ಲೇಖ: ಈ ಕೋಟೆಯ ಸುತ್ತಲೂ ಅಗೆದು ಚಿನ್ನ ಹುಡುಕುತ್ತಿರುವ ಸಾವಿರಾರು ಜನ! – MUGHAL GOLD COINS
ಮಧ್ಯಪ್ರದೇಶದ ಬುರ್ಹಾನ್ಪುರ ಕೋಟೆಯ ಸುತ್ತ ನಿಧಿ ಇದೆ ಎಂಬ ವದಂತಿಗೆ ಜನರು, ಕಂಡಕಂಡಲ್ಲಿ ಗುಂಡಿ ಅಗೆದು ಚಿನ್ನದ ಶೋಧದಲ್ಲಿ ತೊಡಗಿದ್ದಾರೆ.
ಬುರ್ಹಾನ್ಪುರ (ಮಧ್ಯಪ್ರದೇಶ) : ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ನಟನೆಯ ಛಾವಾ ಸಿನಿಮಾದಲ್ಲಿ ಮೊಘಲ್ ಸಾಮ್ರಾಜ್ಯದ ಆಡಳಿತದ ವೇಳೆ ಮಧ್ಯಪ್ರದೇಶದ ಕೋಟೆಗಳಲ್ಲಿ ನಿಧಿ ಅಡಗಿಸಿ ಇಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ವದಂತಿಯನ್ನು ನಂಬಿದ ಜನರು ಇಲ್ಲಿನ ಗ್ರಾಮವೊಂದರಲ್ಲಿ ನಿಧಿ ಅಗೆಯುತ್ತಿದ್ದಾರೆ.
ಕೋಟೆ ಇರುವ ಗ್ರಾಮವಾದ ಆಸಿರ್ಗಢದಲ್ಲಿ ಮೊಘಲ್ ಯುಗದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂಬ ವದಂತಿ ಈ ಹಿಂದಿನಿಂದಲೂ ಹರಿದಾಡುತ್ತಿತ್ತು. ಇದೀಗ ಛಾವಾ ಸಿನಿಮಾದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿದ್ದು, ಜನರಲ್ಲಿ ಕುತೂಹಲವನ್ನು ದ್ವಿಗುಣಗೊಳಿಸಿದೆ. ಹೀಗಾಗಿ, ಜನರು ಜಮೀನುಗಳನ್ನು ಅಗೆದು ನಿಧಿ ಹುಡುಕಾಟ ನಡೆಸಿದ್ದಾರೆ.
ಜನರು ಹಗಲು ರಾತ್ರಿಯೆನ್ನದೇ, ಟಾರ್ಚ್ಗಳನ್ನು ಬಳಸಿ ಹೊಲಗಳಲ್ಲಿ ದೊಡ್ಡ ಗುಂಡಿಗಳನ್ನು ಅಗೆದಿದ್ದಾರೆ. ಆದರೆ, ಈವರೆಗೂ ಯಾರಿಗೂ ಚಿನ್ನದ ನಾಣ್ಯಗಳು ಸಿಕ್ಕ ಬಗ್ಗೆ ವರದಿಯಾಗಿಲ್ಲ. ಇಂಥದ್ದೊಂದು ವಿದ್ಯಮಾನವನ್ನು ಅರಿತ ಸ್ಥಳೀಯ ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಜನರಲ್ಲಿ ಅರಿವು ಮೂಡಿಸಿದ್ದಾರೆ.
ಕೋಟೆಯ ಸಮೀಪದ ಜಮೀನುಗಳಲ್ಲಿ ನಿಧಿ ಹುಡುಕಾಟವನ್ನು ನಿಲ್ಲಿಸಿದ್ದಾರೆ. ಜೊತೆಗೆ ಅದರ ಸುತ್ತಲೂ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಜನರು ನಿಯಮ ಮೀರಿದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚಿನ್ನದ ಶೋಧಕ್ಕಾಗಿ ಅಗೆದಿರುವ ಗುಂಡಿ (ETV Bharat) |
ರಸ್ತೆ ಕಾಮಗಾರಿ ವೇಳೆ ಹಬ್ಬಿದ್ದ ವದಂತಿ: ಮೂರು ತಿಂಗಳ ಹಿಂದೆ ಇಂದೋರ್ ಮತ್ತು ಹೈದರಾಬಾದ್ ಹೆದ್ದಾರಿ ನಿರ್ಮಾಣ ವೇಳೆಯೂ ಇಂಥದ್ದೊಂದು ವದಂತಿ ಹಬ್ಬಿತ್ತು. ಇಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ಜನರು ಸ್ಥಳ ಅಗೆದಿದ್ದರು. ಆದರೆ, ಎಲ್ಲಿಯೂ ಚಿನ್ನ ಪತ್ತೆಯಾದ ಬಗ್ಗೆ ಸುದ್ದಿ ಇಲ್ಲ.
ಚಿನ್ನದ ನಾಣ್ಯಗಳಿಗಾಗಿ ಜನರು ರಾತ್ರಿ ವೇಳೆ ಇಲ್ಲಿಯೇ ಠಿಕಾಣಿ ಹೂಡಿ ಜಮೀನು ಅಗೆಯುತ್ತಿದ್ದಾರೆ. ಹಾಗೊಂದು ವೇಳೆ ನಿಧಿ ಸಿಕ್ಕಲ್ಲಿ ಅದನ್ನು ಸರ್ಕಾರಕ್ಕೆ ನೀಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಆಸಿರ್ಗಢ ಗ್ರಾಮದ ಸುತ್ತಮುತ್ತಲಿನ 10 ಕ್ಕೂ ಹೆಚ್ಚು ಗ್ರಾಮಗಳ ಜನರು ಇಲ್ಲಿ ಜಮಾಯಿಸುತ್ತಿದ್ದಾರೆ. ಇದರಿಂದ ಎಲ್ಲೆಂದರಲ್ಲಿ ಗುಂಡಿಗಳೇ ಗೋಚರಿಸುತ್ತಿವೆ.
ವರದಿ ಪರಿಣಾಮ: ಚಿನ್ನದ ನಾಣ್ಯ ಶೋಧಿಸುವ ಬಗ್ಗೆ Online News Portals ವರದಿಗಳನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಆಡಳಿತ, ಜನರು ಉತ್ಖನನ ನಡೆಸುತ್ತಿರುವ ಸ್ಥಳದಲ್ಲಿ ಪೊಲೀಸರು ಹಗಲು ರಾತ್ರಿ ಪಹರೆ ಕಾಯುತ್ತಿದ್ದಾರೆ. ಹಲವು ಪೊಲೀಸರನ್ನು ಇಲ್ಲಿ ನಿಯೋಜಿಸಲಾಗಿದೆ. ಇದೀಗ, ಜನರು ಗುಂಡಿ ಅಗೆಯುವುದನ್ನು ನಿಲ್ಲಿಸಿದ್ದಾರೆ.