Last Updated:
ಜೋಸ್ ಬಟ್ಲರ್, ಶುಭ್ಮನ್ ಗಿಲ್ ಅರ್ಧಶತಕ ಹಾಗೂ ಬೌಲರ್ಗಳ ಪ್ರದರ್ಶನದಿಂದ ಗುಜರಾತ್ ಟೈಟನ್ಸ್ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸುಲಭ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಜೋಸ್ ಬಟ್ಲರ್ , ಶುಭ್ಮನ್ ಗಿಲ್ ಅರ್ಧಶತಕ ಹಾಗೂ ಬೌಲರ್ಗಳ ಅದ್ಭುತ ಪ್ರದರ್ಶನದಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟನ್ಸ್ 38 ರನ್‌ಗಳ ಸುಲಭ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. 225 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 20 ಓವರ್ಗಳ 6 ವಿಕೆಟ್ ಕಳೆದುಕೊಂಡು 190 ರನ್ಗಳಿಸಲಷ್ಟೇ ಶಕ್ತವಾಯಿತು.
225ರನ್‌ಗಳ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ಮೊದಲ ವಿಕೆಟ್ಗೆ 49 ರನ್ ಸೇರಿಸಿತು. ಹೆಡ್ 16 ಎಸೆತಗಳಲ್ಲಿ 4 ಬೌಂಡರಿ ಸಹಿತ 20 ರನ್ಗಳಿಸಿ ಔಟಾಗುವ ಮೂಲಕ ಮತ್ತೊಮ್ಮೆ ವಿಫಲವಾಯಿತು. ನಂತರ ಬಂದ ಇಶಾನ್ ಕಿಶನ್ 17 ಎಸೆತಗಳಲ್ಲಿ 13 ರನ್ಗಳಿಸಿ ಮತ್ತೊಮ್ಮೆ ಕಳಪೆ ಮೊತ್ತಕ್ಕೆ ಔಟ್ ಆದರು. ಅಭಿಷೇಕ್ ಶರ್ಮಾ 41 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ಗಳ ಸಹಿತ 74 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಹೆನ್ರಿಚ್ ಕ್ಲಾಸೆನ್ 18 ಎಸೆತಗಳಲ್ಲಿ 23 ರನ್, ನಿತೀಶ್ ಕುಮಾರ್ ರೆಡ್ಡಿ 1 ಬೌಂಡರಿ, 2 ಸಿಕ್ಸರ್ ಸಹಿತ 21 ರನ್ಗಳಿಸಿದರು. ಪ್ಯಾಟ್ ಕಮಿನ್ಸ್ 10 ಎಸೆತಗಳಲ್ಲಿ ಅಜೇಯ 19 ರನ್ಗಳಿಸಿದರಾದರೂ ಇವರ ಹೋರಾಟ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಗುಜರಾತ್ ಟೈಟನ್ಸ್ ಪರ ಕನ್ನಡಿಗ ಪ್ರಸಿಧ್ ಕೃಷ್ಣ19ಕ್ಕೆ 2 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಸಿರಾಜ್ 33ಕ್ಕೆ 2, ಇಶಾಂತ್ ಶರ್ಮಾ 35ಕ್ಕೆ1, ಜೆರಾಲ್ಡ್ ಕೊಯೆಟ್ಜಿ 36ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭಪಡೆದುಕೊಂಡಿತು. ಪವರ್‌ಪ್ಲೇನಲ್ಲಿ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ 82 ರನ್ ಗಳಿಸಿದರು. ಸುದರ್ಶನ್ 23 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 48 ರನ್ ಗಳಿಸಿ ಔಟಾದರು. ಗಿಲ್ ಮತ್ತು ಸುದರ್ಶನ್ 87 ರನ್‌ಗಳ ಜೊತೆಯಾಟ ನಡೆಸಿದರು. ನಾಯಕ ಶುಭಮನ್ ಗಿಲ್ 38 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಿತ 76 ರನ್ಗಳಿಸಿ ರನ್ಔಟ್ ಆದರು. ಜೋಸ್ ಬಟ್ಲರ್ 37 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ 64 ರನ್ ಗಳಿಸಿದರೆ, ವಾಷಿಂಗ್ಟನ್ ಸುಂದರ್ 16 ಎಸೆತಗಳಲ್ಲಿ 21 ರನ್ಗಳಿಸಿದರು. ಶಾರುಖ್ ಖಾನ್ ಅಜೇಯ 6, ರಾಹುಲ್ ತೆವಾಟಿಯಾ 6ರನ್ಗಳಿಸಿದರು.
May 02, 2025 11:36 PM IST