ಕಳೆದ ವರ್ಷ 60 ಸಾವಿರಕ್ಕೆ ಮಾರಾಟವಾಗಿದ್ದ ಮಗು ರಕ್ಷಿಸಿದ ಬಳ್ಳಾರಿ ಪೊಲೀಸರು
– CHILD SELLING CASE
ಕಳೆದ ವರ್ಷ ಹುಟ್ಟಿದ 14 ದಿನಕ್ಕೆ ತನ್ನ ಮಗುವನ್ನು ಮಾರಾಟ ಮಾಡಿದ್ದ ತಾಯಿ ಹಾಗೂ
ಖರೀದಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆ
ಬಳ್ಳಾರಿ: ಕಳೆದ ವರ್ಷ ಬಳ್ಳಾರಿಯಲ್ಲಿ 60 ಸಾವಿರಕ್ಕೆ ಮಾರಾಟವಾಗಿದ್ದ ಮಗುವನ್ನು ರಕ್ಷಿಸಿ ಬಳ್ಳಾರಿಗೆ ಕರೆತರುವಲ್ಲಿ
ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
2024ರ ಆಗಸ್ಟ್ 5ರಂದು ನವಜಾತ ಗಂಡು ಮಗುವಿನ ಮಾರಾಟವಾಗಿದೆ ಎಂಬ ಅನಾಮಧೇಯ ಕರೆಯ ಜಾಡು ಹಿಡಿದು ತನಿಖೆ ಆರಂಭಿಸಿದ್ದ
ಪೊಲೀಸರು ಕೊನೆಗೂ ಮಗುವನ್ನು ನೆರೆಯ ಆಂಧ್ರ ಪ್ರದೇಶದ ಆಲೂರಿನಿಂದ ಕರೆತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವನ್ನು ಖರೀದಿಸಿದ್ದ
ನವೀನ್ ಕುಮಾರ್ ಮತ್ತು ಮಗುವಿನ ತಾಯಿಯನ್ನು ಬಂಧಿಸಲಾಗಿದೆ.
ಮಗುವನ್ನು ಮಾರಾಟ ಮಾಡಿದ್ದ ಮಹಿಳೆಯು 2024ರ ಫೆಬ್ರವರಿಯಲ್ಲಿ ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು
ಕಾಲೇಜಿನಲ್ಲಿ (ವಿಮ್ಸ್) ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅದೇ ತಿಂಗಳ 20 ರಂದು 60 ಸಾವಿರಕ್ಕೆ 14 ದಿನಗಳ ಮಗುವನ್ನು ಬೇರೊಬ್ಬರಿಗೆ
ಮಾರಾಟ ಮಾಡಿದ್ದಳು. ಈ ಮಗುವಿನ ಮಾರಾಟದ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಾಯವಾಣಿಗೆ ಆಗಸ್ಟ್ ತಿಂಗಳಲ್ಲಿ
ಅನಾಮಧೇಯ ಕರೆಯೊಂದು ಬಂದಿತ್ತು. ಈ ಕರೆ ಆಧರಿಸಿ ಅಧಿಕಾರಿಗಳು ಪರಿಶೀಲಿಸಿದಾಗ, ಮಗು ಮಾರಾಟವಾಗಿರುವುದು ಖಚಿತವಾಗಿ,
ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಅಂತಿಮವಾಗಿ ಮಗುವನ್ನು ರಕ್ಷಿಸಿದ್ದಾರೆ.

ಮಗುವನ್ನು ಖರೀದಿಸಿದ್ದ ನವೀನ್ ಕುಮಾರ್ ವೃತ್ತಿಯ ಭಾಗವಾಗಿ ದಕ್ಷಿಣದ ಬೇರೆ ಬೇರೆ ರಾಜ್ಯಗಳಲ್ಲಿ ಸಂಚರಿಸುತ್ತಿದ್ದ.
ಹೀಗಾಗಿ ಆತನನ್ನು ಪತ್ತೆ ಮಾಡುವುದು ವಿಳಂಬವಾಗಿತ್ತು. ಮಕ್ಕಳಿರದ ಕಾರಣ ಆತ ಮಗುವನ್ನು
ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.