Criticism of Mohammed Shami for not following Ramadan fasting rules
credits : Google.com |
ಬರೇಲಿ (ಉತ್ತರ ಪ್ರದೇಶ): ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ‘ರೋಜಾ’ (ಉಪವಾಸ) ಮುರಿದಿದ್ದಕ್ಕೆ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಂಜಾನ್ ಸಮಯದಲ್ಲಿ ‘ರೋಜಾ’ ಆಚರಿಸದ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಕ್ರಮ ಸರಿಯಲ್ಲ ಎಂದಿದ್ದಾರೆ. ಆದರೆ, ತರಬೇತುದಾರ ಬದ್ರುದ್ದೀನ್ ಸಿದ್ದಿಕಿ ಅವರು ಶಮಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಮೌಲಾನಾ ಬರೇಲ್ವಿ ಹೇಳಿದ್ದೇನು?: ”ಇಸ್ಲಾಂ ಧರ್ಮದಲ್ಲಿ ರಂಜಾನ್ ತಿಂಗಳಿನ ಉಪವಾಸವು ಅತ್ಯಂತ ಪವಿತ್ರವಾದದ್ದು. ಪ್ರತಿಯೊಬ್ಬ ಮುಸಲ್ಮಾನನೂ ಕಡ್ಡಾಯವಾಗಿ ಪಾಲಿಸಲೇಬೇಕಾದ ಧಾರ್ಮಿಕ ವಿಧಿವಿಧಾನವಾಗಿದೆ. ಯಾವುದೇ ಕಾರಣಕ್ಕೂ ಉಪವಾಸವನ್ನು ಮುರಿಯುವಂತಿಲ್ಲ. ಒಂದು ವೇಳೆ ಯಾರಾದರೂ ಉದ್ದೇಶಪೂರ್ವಕವಾಗಿ ಉಪವಾಸ ಮುರಿದರೆ ಅದು ದೊಡ್ಡ ಪಾಪ, ಶರಿಯತ್ ದೃಷ್ಟಿಯಲ್ಲಿ ಅಂತವರು ಅಪರಾಧಿಗಳೆಂದೇ ಪರಿಗಣಿಸಲ್ಪಡುತ್ತಾರೆ. ರೋಜಾ’ (ಉಪವಾಸ) ಮುರಿಯುವ ಮೂಲಕ ಅವರು (ಮೊಹಮ್ಮದ್ ಶಮಿ) ಅಪರಾಧ ಮಾಡಿದ್ದಾರೆ. ಹೀಗೆ ಮಾಡಬಾರದು. ಅಂತವರು ದೇವರಿಗೆ ಉತ್ತರಿಸಬೇಕಾಗುತ್ತದೆ” ಎಂದು ಮೌಲಾನಾ ಬರೇಲ್ವಿ ಹೇಳಿದ್ದಾರೆ.
”ಇಸ್ಲಾಂ ಧರ್ಮದಲ್ಲಿ ಯಾವುದೇ ಓರ್ವ ಆರೋಗ್ಯವಂತ ಪುರುಷ ಅಥವಾ ಮಹಿಳೆ ರಂಜಾನ್ ತಿಂಗಳಿನಲ್ಲಿ ‘ರೋಜಾ’ ಆಚರಿಸದಿದ್ದರೆ ಅದು ದೊಡ್ಡ ಅಪರಾಧಕ್ಕೆ ಸಮ. ಭಾರತದ ಪ್ರಸಿದ್ಧ ಕ್ರಿಕೆಟ್ ಪಟು ಮೊಹಮ್ಮದ್ ಶಮಿ ಮಂಗಳವಾರದ ಮೊದಲ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಆಡುತ್ತಿರುವಾಗ ಪಾನೀಯ ಸೇವಿಸತ್ತಿರುವುದನ್ನು ಪ್ರೇಕ್ಷಕರು ಗಮನಿಸಿದ್ದಾರೆ. ಅವರು ಮೈದಾನದಲ್ಲಿ ಆಡುತ್ತಿದ್ದರೆ, ಆರೋಗ್ಯವಾಗಿದ್ದಾರೆ ಅಂತಲೇ ಅರ್ಥ. ಅಂತಹ ಸ್ಥಿತಿಯಲ್ಲಿ, ಅವರು ‘ರೋಜಾ’ ಮುರಿದು ಜನರಲ್ಲಿ ತಪ್ಪು ಸಂದೇಶ ರವಾನಿಸಿದ್ದಾರೆ” ಎಂದು ಮೌಲಾನಾ ಬರೇಲ್ವಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪರ- ವಿರೋಧದ ಚರ್ಚೆ: ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ತಂಡಕ್ಕಾಗಿ ಆಡುವಾಗ ಧಾರ್ಮಿಕ ಆಚರಣೆಯನ್ನು ದೂರವಿಟ್ಟ ವೇಗಿ ಶಮಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಮುಸ್ಲಿಂ ಧರ್ಮಗುರುಗಳು ಶಮಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಶಮಿ ಬೆಂಬಲಕ್ಕೆ ಬಂದ ಕೋಚ್: ತರಬೇತುದಾರ ಬದ್ರುದ್ದೀನ್ ಸಿದ್ದಿಕಿ ಅವರು ಶಮಿ ಅವರ ಬೆಂಬಲಕ್ಕೆ ಬಂದಿದ್ದಾರೆ. ಜಾಲತಾಣಗಳಲ್ಲಿ ಕೆಲವರು ಶಮಿ ಅವರನ್ನು ಟ್ರೋಲ್ ಮಾಡುತ್ತಿದ್ದು ಹೀಗೆ ಮಾಡುತ್ತಿರುವವರಿಗೆ ಇಸ್ಲಾಂ ಅರ್ಥವಾಗುವುದೇ ಇಲ್ಲ. ಶಮಿ ದೇಶಕ್ಕಾಗಿ ಆಡುತ್ತಿದ್ದಾರೆ. ದೇಶಕ್ಕಾಗಿ ಉಪವಾಸ ಕೈಬಿಟ್ಟಿದ್ದಾರೆ. ಈ ವೇಳೆ ದೇಶಕ್ಕೆ ಅವರ ಅವಶ್ಯಕತೆ ಇದೆ. ನೀವು ಈಗ ಉಪವಾಸ ಮಾಡದಿದ್ದರೆ ಈದ್ ನಂತರ ಆಚರಿಸಬಹುದು ಅಂತ ಇಸ್ಲಾಂನಲ್ಲಿ ಹೇಳಲಾಗಿದೆ. ಶಮಿ ಅವರ ಟ್ರೋಲ್‌ಗಳಿಗೆ ಅವರ ಆಲೋಚನೆಯ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಒಂದು ಸಮುದಾಯದ ಹೆಸರನ್ನು ಇಷ್ಟೊಂದು ಎತ್ತರಕ್ಕೆ ತೆಗೆದುಕೊಂಡ ಹೋದ ಶಮಿ ಅವರ ಬಗ್ಗೆ ನಾವು ಹೆಮ್ಮೆ ವ್ಯಕ್ತಪಡಿಸಬೇಕು ಎಂದಿದ್ದಾರೆ.
ಶಮಿ ಸೋದರಸಂಬಂಧಿ ಡಾ. ಮುಮ್ತಾಜ್ ಪ್ರತಿಕ್ರಿಯೆ ಹೀಗಿದೆ: ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ಶಮಿ ಅವರ ಸೋದರಸಂಬಂಧಿ ಡಾ. ಮುಮ್ತಾಜ್, “ಶಮಿ ದೇಶಕ್ಕಾಗಿ ಆಡುತ್ತಿದ್ದಾರೆ. ‘ರೋಜಾ’ ಇಟ್ಟುಕೊಳ್ಳದ ಮತ್ತು ಪಂದ್ಯಗಳನ್ನು ಆಡುತ್ತಿರುವ ಅನೇಕ ಪಾಕಿಸ್ತಾನಿ ಆಟಗಾರರಿದ್ದಾರೆ. ಆದ್ದರಿಂದ ಇದು ಹೊಸದೇನಲ್ಲ. ಧರ್ಮ ಗುರುಗಳಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಮೊಹಮ್ಮದ್ ಶಮಿ ಅವರ ಬಗ್ಗೆ ನಮ್ಮ ಕಡೆಯಿಂದ ಮೆಚ್ಚುಗೆ ಇದೆ. ಹಾಗಾಗಿ ಮಾರ್ಚ್ 9 ರಂದು ನಡೆಯುವ ಪಂದ್ಯಕ್ಕೆ ಸಿದ್ಧರಾಗುವಂತೆ ಹಾಗೂ ಇಂತಹ ವಿಷಯಗಳತ್ತ ಗಮನ ನೀಡದಂತೆ ನಾವು ಅವರಲ್ಲಿ ಹೇಳುತ್ತೇವೆ” ಎಂದಿದ್ದಾರೆ.
ಮೌಲಾನಾ ಹೇಳಿಕೆ NCP ಶಾಸಕ ರೋಹಿತ್ ಪವಾರ್ ವಿರೋಧ: ಎನ್ಸಿಪಿ ಶಾಸಕ ರೋಹಿತ್ ಪವಾರ್ ಕೂಡ ಮೌಲಾನಾ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ”ಮೊಹಮ್ಮದ್ ಶಮಿ ಓರ್ವ ಕಟ್ಟಾ ಭಾರತೀಯ. ಅವರು ಭಾರತೀಯ ಕ್ರಿಕೆಟ್ ತಂಡವನ್ನು ಹಲವು ಬಾರಿ ಗೆಲ್ಲುವಂತೆ ಮಾಡಿದ್ದಾರೆ. ಕ್ರೀಡೆಯಲ್ಲಿ ಧರ್ಮವನ್ನು ಬೆಳೆಸಬಾರದು. ನೀವು ಇಂದು ಯಾವುದೇ ಮುಸ್ಲಿಂ ವ್ಯಕ್ತಿಯನ್ನು ಕೇಳಿದರೂ ಅವರು ಮೊಹಮ್ಮದ್ ಶಮಿ ಬಗ್ಗೆ ಹೆಮ್ಮೆಪಡುತ್ತಾರೆ. ನಿಮ್ಮ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ” ಎಂದಿದ್ದಾರೆ.
ಬಿಜೆಪಿ ನಾಯಕರ ಪ್ರತಿಕ್ರಿಯೆ: ಮೌಲಾನಾ ಅವರ ಬೆದರಿಸುವ ಕೆಲಸ ಇಲ್ಲಿ ನಡೆಯುವುದಿಲ್ಲ. ನಂಬಿಕೆ ಅನ್ನೋದು ಅವರವರ ವೈಯಕ್ತಿಕ ವಿಷಯ. ನೀವು ಬೇರೆಯವರ ನಂಬಿಕೆಯನ್ನು ನೋಯಿಸಬಾರದು. ಪ್ರಾರ್ಥನೆ, ಪೂಜಾ ವಿಧಾನ, ಇಬಾದತ್, ಉಪವಾಸ-ವಿಧಿ ಅಥವಾ ನಮಾಜ್, ರೋಜಾವನ್ನು ಅನುಸರಿಸಬೇಕೆ ಅಥವಾ ಬೇಡವೇ ಎಂಬುದನ್ನು ನೀವೇ ನಿರ್ಧರಿಸಬಹುದು. ಯಾವುದೇ ಮುಲ್ಲಾ, ಮೌಲ್ವಿ, ಮುಫ್ತಿ, ಉಲೇಮಾ, ಸಾಧು-ಸಂತ ಅಥವಾ ಪಂಡಿತರು ನಿರ್ಧರಿಸುವುದಿಲ್ಲ. ನವರಾತ್ರಿ/ಜನ್ಮಾಷ್ಟಮಿಯ ಉಪವಾಸವನ್ನು ಯಾರೂ ಬಲವಂತವಾಗಿ ಆಚರಿಸುವುದಿಲ್ಲ. ಉಪವಾಸ ಮಾಡದಿದ್ದಕ್ಕಾಗಿ ಅವರು ಹೇಗೆ ಅಪರಾಧಿ ಆಗುತ್ತಾರೆ? ಎಂದು ಬಿಜೆಪಿ ನಾಯಕ ರಾಕೇಶ್ ತ್ರಿಪಾಠಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಬರೇಲಿಯ ಮೌಲಾನಾ ನೀಡಿರುವ ಹೇಳಿಕೆ ಕೇವಲ ಪ್ರಚಾರಕ್ಕಾಗಿ ಎಂದು ಶಿಯಾ ಧರ್ಮಗುರು ಮೌಲಾನಾ ಯಾಸೂಬ್ ಅಬ್ಬಾಸ್ ಕೂಡ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿರುವ ಶಮಿ, 48 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.