ಅಪಾರ್ಟ್ಮೆಂಟ್ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ
ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ( INTERESTING DISCUSSION ON STREET DOGS )

ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ತೊಂದರೆಯ ವಿಚಾರ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಸದಸ್ಯರ
ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ: ಇಂದು ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ವಿಷಯ ಪ್ರಸ್ತಾಪಿಸಿ, ಬೀದಿನಾಯಿಗಳ
ಹಾವಳಿಯಿಂದ ತೊಂದರೆಯಾಗುತ್ತಿದೆ. ಸನ್ಸಿಟಿ ಅಪಾರ್ಟ್ಮೆಂಟ್ 18ನೇ ಮಹಡಿಗೆ ಬೀದಿನಾಯಿಗಳನ್ನು ಮಹಿಳೆಯೊಬ್ಬರು ಕರೆದೊಯ್ದಿದ್ದಾರೆ. ಇದರಿಂದ
ತೊಂದರೆಯಾಗುತ್ತಿದೆ. ಅಲ್ಲಿನ ನಿವಾಸಿಗಳಿಗೆ ಆ ಬೀದಿ ನಾಯಿಗಳು ಕಚ್ಚಿವೆ. ಬಿಬಿಎಂಪಿ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ. ಆ ನಾಯಿಗಳು
ಅಪಾರ್ಟ್ಮೆಂಟ್ನಿಂದ ಹೊರಹೋಗಬೇಕು. ಬೀದಿನಾಯಿಗಳ ನಿರ್ವಹಣೆಗೆ 5 ಕೋಟಿ ರೂ. ಬಜೆಟ್ ಇರುತ್ತದೆ. ಈ ಸಂಬಂಧ ಪೊಲೀಸ್ ಇಲಾಖೆ
ಹಾಗೂ ಬಿಬಿಎಂಪಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ವಿಧಾನಸೌಧದ ಸುತ್ತವೇ ಇವೆಯಂತೆ 1500 ಬೀದಿ ನಾಯಿಗಳು: ಮಧ್ಯ ಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್,
ವಿಧಾನಸಭೆಯ ಸುತ್ತಮುತ್ತ 1500 ನಾಯಿಗಳಿರುವ ಬಗ್ಗೆ ಸಭಾಧ್ಯಕ್ಷರು ಸಭೆ ನಡೆಸಿದ್ದಾರೆ. ಬೀದಿ ನಾಯಿಗಳೆಲ್ಲಾ ಬೀದಿಯಲ್ಲೇ ಇರಲಿ,
ಅಪಾರ್ಟ್ಮೆಂಟ್ಗೆ ಬರುವುದು ಬೇಡ ಎಂದರು.
ಈ ಬಗ್ಗೆ ಸಿಎಸ್ ಜತೆ ಮಾತನಾಡಿದ್ದೇನೆ ಎಂದ ಸ್ಪೀಕರ್: ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಬೀದಿ ನಾಯಿಗಳಿಗೆ
ಗೌರವಪೂರ್ವಕ ಬದುಕು ಕೊಡಬೇಕೆಂಬ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ
ಎಂದು ಹೇಳಿದರು.

ಬೀದಿ ನಾಯಿ ಅಷ್ಟೇ ಅಲ್ಲ ವಿಧಾನಸೌಧಕ್ಕೆ ನಾಗರಹಾವು ಬಂದಿತ್ತು ಎಂದ ಶಾಸಕ: ಬಿಜೆಪಿಯ ಮತ್ತೊಬ್ಬ ಶಾಸಕ ಬಿ.ಪಿ.ಹರೀಶ್
ಮಾತನಾಡಿ, ಬೀದಿ ನಾಯಿಗಳಷ್ಟೇ ಅಲ್ಲ, ವಿಧಾನಸೌಧಕ್ಕೆ ನಾಗರಹಾವು ಸಹ ಬಂದಿದೆ ಎಂದು ಗಮನ ಸೆಳೆದರು. ಆಗ ಸಭಾಧ್ಯಕ್ಷರು ನಾಯಿಯಷ್ಟೇ ಅಲ್ಲ,
ನಾಗರಹಾವೂ ಇರಬೇಕು, ನಿಧಿ ಕಾಯುವುದು ನಾಗರಹಾವೇ ಅಲ್ಲವೇ? ಎಂದರು.

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೊಮ್ಮನಹಳ್ಳಿ ಭಾಗದಲ್ಲಿ ಶಾಸಕ ಸತೀಶ್ ರೆಡ್ಡಿಯವರಿಗೆ ಗೊತ್ತಿಲ್ಲದೆ
ನಾಯಿ ಕೂಡ ಅಲ್ಲಾಡುವುದಿಲ್ಲ. ಅಪಾರ್ಟ್ಮೆಂಟ್ಗೆ ಸೆಕ್ಯೂರಿಟಿ ಇರುತ್ತಾರೆ, ಕಾಂಪೌಂಡ್ ಇರುತ್ತದೆ, ಹೇಗೆ ಬಿಟ್ಟರು?
ಎಂದು ಪ್ರಶ್ನಿಸಿದರು. ಈ ಸಂಬಂಧ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಹಾಗೂ ಪೊಲೀಸ್
ಇಲಾಖೆಗೆ ಸೂಚಿಸುವುದಾಗಿ ಹೇಳಿದರು.