ಮಲೆನಾಡಿನಲ್ಲಿ ಸೂರ್ಯನ ಝಳಕ್ಕೆ ಬಸವಳಿದ ಜನ: ಮಾರ್ಚ್ ಆರಂಭಲ್ಲೇ ಬಿಸಿ ಗಾಳಿಯ ಅನುಭವ – PRE SUMMER HEAT WAVE
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಈ ಬಾರಿ ಬೇಸಿಗೆ ಬಿಸಿ ಅಧಿಕವಾಗಿದೆ. ಅಕಾಲಿಕ ಬೇಸಿಗೆ
ಅನುಭವಕ್ಕೆ ತತ್ತರಿಸಿರುವ ಜನರಿಗೆ ಆರೋಗ್ಯದ ಕುರಿತು ಜಾಗ್ರತೆವಹಿಸುವಂತೆ ಜಿಲ್ಲಾಡಳಿತ ಕೂಡ ಸೂಚಿಸಿದೆ.
ಶಿವಮೊಗ್ಗ: ಮಲೆನಾಡಿನಲ್ಲಿ ಬೇಸಿಗೆ ಬಿಸಿ ಈ ಬಾರಿ ಭಯಂಕರವಾಗಿದೆ. ಮಾರ್ಚ್ ಆರಂಭದಲ್ಲೇ ಜನರು ಬಿರು ಬಿಸಿಲಿಗೆ ಬಸವಳಿದಿದ್ದು,
ಅತ್ಯಧಿಕ ತಾಪಮಾನ ದಾಖಲಾಗಿದೆ. ಹವಾಮಾನ ವೈಪರೀತ್ಯದ ಪರಿಣಾಮವಾಗಿ ಮಲೆನಾಡು ಕೂಡ ಬೆಂಗಾಡಿನಂತೆ ಸುಡುತ್ತಿದ್ದು, ಬಿಸಿಗಾಳಿ, ಬಿಸಿ ವಾತಾವರಣಕ್ಕೆ ಜನರು ಹೈರಾಣಾಗುತ್ತಿದ್ದಾರೆ.
ಈಗಾಗಲೇ ಸರ್ಕಾರ ಕೂಡ ಬಿಸಿಗಾಳಿ ಕುರಿತು ಜಿಲ್ಲಾಡಳಿತದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದೆ. ಬಿಸಿಗಾಳಿಯ ಧಗೆಯುವ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆ ತನಕ ಹೆಚ್ಚಿದ್ದು,
ಹೊರ ಸಂಚಾರ ಕಡಿಮೆ ಮಾಡುವಂತೆ ತಿಳಿಸಿದೆ. ಹಾಗೇ ಮಕ್ಕಳು ಮತ್ತು ವಯೋವೃದ್ಧರ ಆರೋಗ್ಯ, ಹೆಚ್ಚು ನೀರು ಕುಡಿಯುವಂತೆ, ಆರೋಗ್ಯಕರ ಆಹಾರಕ್ಕೆ ಒತ್ತು ನೀಡುವಂತೆ ಸಲಹೆ ನೀಡಿದೆ.
ಸವಾಲಾದ ಬೇಸಿಗೆ: ಪಶ್ಚಿಮ ಘಟ್ಟದ ಸಾಲಿನಲ್ಲಿ ಕಂಡು ಬರುವ ಮಲೆನಾಡಿನಲ್ಲಿ ಕಾಡು, ರಸ್ತೆ ಬದಿಯ ಮರಗಳ ನಾಶವಾಗುತ್ತಿದ್ದು, ಇದೀಗ ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗೆ
ಬಿರು ಬೇಸಿಗೆಯ ಊರಾಗಿ ನಿರ್ಮಾಣವಾಗಿದೆ. ಪರಿಣಾಮವಾಗಿ ತಂಪಾಗಿರಬೇಕಾದ ನಗರದಲ್ಲಿ ಸೂರ್ಯನ ಶಾಖ ಜನರನ್ನು ಸುಡುವಂತೆ ಮಾಡಿದೆ. ಇದು ಜನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಬಿಸಿಲನ ಸಮಯದಲ್ಲಿ ಜನರು ವ್ಯಾಪಾರ- ಓಡಾಟ ಸವಾಲಾಗಿದೆ.
ಸದಾ ನೀರು ಇರುವಂತೆ ನೋಡಿಕೊಳ್ಳಬೇಕಾದ ಸವಾಲು: ಈ ನಡುವೆ ಬೆಳೆಗಳು ಕೂಡ ಬಿಸಿಲಿನಿಂದ ಒಣಗುತ್ತಿದ್ದು, ಅಡಕೆ ತೋಟಗಳ ಉಳಿವಿಗೆ ಇದೀಗ ಸದಾ ನೀರು ಇರುವಂತೆ
ನೋಡಿಕೊಳ್ಳುವ ಸವಾಲು ಕೂಡ ರೈತರಿಗೆ ಎದುರಾಗಿದೆ.
ಎಸಿ ಕೊಳ್ಳುವ ಬದಲು ಗಿಡಗಳನ್ನು ಬೆಳೆಸಿ: ಸಹ್ಯಾದ್ರಿ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪರಿಸರ ನಾಗರಾಜ್ ಮಾತನಾಡಿ, ಬೇಸಿಗೆ ಪ್ರಾರಂಭವಾದರೆ,
ಸಾಕು ಮನೆಯಲ್ಲಿಯೇ ಇರಲು ಆಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಎಲ್ಲರೂ ಎಸಿ ಖರೀದಿಗೆ ಮುಂದಾಗುತ್ತಿದ್ದಾರೆ. ಅಕಾಲಿಕ ಬೇಸಿಗೆಗೆ ಶಾಶ್ವತ ಪರಿಹಾರವನ್ನೆ
ಕಂಡು ಕೊಳ್ಳುತ್ತಿಲ್ಲ. ಪರಿಸರದ ಸಂರಕ್ಷಣೆ ಮಾಡಬೇಕಿದೆ. ಬಿಸಿಲಿನ ತಾಪ ಕಡಿಮೆ ಹೇಗೆ ಮಾಡಬೇಕು ಎಂದು ಎಲ್ಲಾರಿಗೂ ತಿಳಿದಿದೆ.
ಆದರೆ, ಭೂಮಿ ತಂಪು ಮಾಡುವ ಕೆಲಸವನ್ನು ಯಾರು ಮಾಡುತ್ತಿಲ್ಲ. ಮನೆಗೆ ಎಸಿ ಹಾಕಿಸುವ ಬದಲು ಮನೆಯ ಮೇಲೆ ಗಿಡಗಳ ಕುಂಡಗಳನ್ನಿಟ್ಟು
ಕೊಂಡರೆ ಅದು ಪರಿಸರಕ್ಕೂ ಅನುಕೂಲವಾಗುವ ಜೊತೆಗೆ ಮನೆಗೆ ತಂಪು ನೀಡುತ್ತದೆ ಎಂದು ಮರೆಯಬಾರದು ಎಂದು ಸಲಹೆ ನೀಡಿದರು.
ಮಲೆನಾಡಲ್ಲಿ ಉತ್ತರ ಕರ್ನಾಟಕ ವಾತಾವರಣ: ಸಾರ್ವಜನಿಕರಾದ ಶಿವಾನಂದ ಮಾತನಾಡಿ, ಮಲೆನಾಡಿನಲ್ಲಿಯೇ ,38 ರಿಂದ 40 ಡಿಗ್ರಿಯಷ್ಟು ತಾಪಮಾನ ಉಂಟಾಗುತ್ತಿದೆ.
ಮನುಷ್ಯ ತನ್ನ ಆಸೆಗಾಗಿ ಮರಗಿಡಗಳನ್ನು ಕತ್ತಿರಿಸದ ಪರಿಣಾಮ ಮಳೆ ಕಡಿಮೆಯಾಗುತ್ತಿದೆ. ಬೇಸಿಗೆಯಲ್ಲಿ ವೃದ್ದರು, ಮಕ್ಕಳು ಓಡಾಡಲು
ಕಷ್ಟಪಡುವಂತಾಗಿದೆ. ಉತ್ತರ ಕರ್ನಾಟಕದ ಪರಿಸ್ಥಿತಿ ನಮ್ಮಲ್ಲೂ ಉಂಟಾಗಿದೆ.